30 ಲಕ್ಷಕ್ಕಾಗಿ ಉದ್ಯಮಿಯ ದರೋಡೆಗೈದವರಿಗೆ ಸಿಕ್ಕಿದ್ದು ಕೇವಲ 5 ರೂ. ಮತ್ತು ಜೈಲು !

Update: 2018-08-10 13:39 GMT

ಹೊಸದಿಲ್ಲಿ, ಆ.10: ಕೆಲ ವಾರಗಳ ಹಿಂದೆ ಪೂರ್ವ ದಿಲ್ಲಿಯ ಉದ್ಯಮಿಯೊಬ್ಬರನ್ನು ದೋಚಿದ ಐದು ಮಂದಿ ಕಳ್ಳರ ತಂಡವೊಂದು  ತಮ್ಮಲ್ಲಿ ಪ್ರತಿಯೊಬ್ಬರು ಕನಿಷ್ಠ ರೂ 5 ಲಕ್ಷ ಪಡೆಯಬಹುದೆಂಬ ಕನಸು ಕಂಡಿತ್ತು. ಆದರೆ ಅವರು ಉದ್ಯಮಿಯ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿದ್ದದ್ದು ಕೇವಲ ಐದು ರೂಪಾಯಿಯ ನಾಣ್ಯ ಮಾತ್ರ. ಅವರ ದುರಾದೃಷ್ಟ ಅಷ್ಟಕ್ಕೇ ಕೊನೆಯಾಗಿಲ್ಲ. ಬುಧವಾರ ಅವರಲ್ಲಿ ಇಬ್ಬರನ್ನು ಬಂಧಿಸಲಾಯಿತಲ್ಲದೆ ಉಳಿದ ಮೂವರನ್ನೂ ಗುರುತಿಸಲಾಗಿದ್ದು ಅವರನ್ನು ಸದ್ಯದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಪರಾಧಿಯೆಂದು ಘೊಷಿಸಲ್ಪಟ್ಟಲ್ಲಿ ಅವರಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಾಗಬಹುದು.

ಫೋಮ್ ಮತ್ತು ಜಾಕೆಟ್ ಬಟ್ಟೆಗಳನ್ನು ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದ ಶಹದ್ರಾ ನಿವಾಸಿಯಾಗಿರುವ 43 ವರ್ಷದ ಉದ್ಯಮಿಯನ್ನು ಆರೋಪಿಗಳು ಮೇ 26ರಂದು ಲೂಟಿಗೈದಿದ್ದರು.

ಆರೋಪಿಗಳಲ್ಲೊಬ್ಬನಾಗಿದ್ದ 35 ವರ್ಷದ ಇಫ್ತಿಕಾರ್ ಖಾಲಿದ್ ಕೂಡ ಮೌಜಪುರ್ ಎಂಬಲ್ಲಿ ಜಾಕೆಟ್ ತಯಾರಿಕಾ ಘಟಕ ಹೊಂದಿದ್ದು ಉದ್ಯಮಿಯ  ಗ್ರಾಹಕನಾಗಿದ್ದ. ಈ ಭಾಗದ ಉದ್ಯಮಿಗಳೆಲ್ಲಾ  ಸಂಜೆ ಮನೆಗೆ ಹಿಂದಿರುಗುವಾಗ ದೊಡ್ಡ ಮೊತ್ತ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆಂದೂ ಆತನಿಗೆ ಗೊತ್ತಿತ್ತು. ಮೇ 26ರಂದು ಉದ್ಯಮಿ  ದೊಡ್ಡ ವ್ಯವಹಾರ ನಡೆಸಿದ್ದನೆಂದು ಖಾಲಿದ್ ಗಮನಿಸಿದ್ದ. ಆ ದಿನ ಆತ ಕನಿಷ್ಠ ರೂ 25ರಿಂದ ರೂ 30 ಲಕ್ಷ ಮನೆಗೊಯ್ಯಬಹುದೆಂದೂ ಅಂದಾಜಿಸಿದ್ದ. ಉದ್ಯಮಿಯ ಬಳಿಯಿದ್ದ ದಪ್ಪ ಬ್ಯಾಗ್ ಆತನ ಶಂಕೆಗೆ ಪುಷ್ಠಿ ನೀಡಿತ್ತು. ಆದರೆ ಆ ಉದ್ಯಮಿ ತನ್ನ ಮನೆಗೆ ನಗದು ಕೊಂಡು ಹೋಗುವುದಿಲ್ಲವೆಂಬ ವಾಸ್ತವ ಅವರಿಗೆ ತಿಳಿದಿರಲಿಲ್ಲ. ಆತನ ದಪ್ಪ ಚೀಲದಲ್ಲಿ ಬಟ್ಟೆಗಳು ಮತ್ತು ಟಿಫಿನ್ ಬಾಕ್ಸ್ ಮಾತ್ರವಿರುತ್ತಿತ್ತು.

ಆ ದಿನ ರಾತ್ರಿ ಉದ್ಯಮಿ ತನ್ನ ಮನೆ ಸಮೀಪಿಸಬೇಕೆನ್ನುವಷ್ಟರಲ್ಲಿ ಮೋಟಾರ್ ಸೈಕಲ್ ನಲ್ಲಿ ಬಂದ ಮೂವರು ಕಳ್ಳರು ಆತನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಗಾಳಿಯಲ್ಲಿ ಗುಂಡು ಹಾರಿಸಿ  ಚೀಲದೊಂದಿಗೆ ಹಾಗೂ ಸ್ಕೂಟರ್ ನೊಂದಿಗೆ ಪರಾರಿಯಾಗಿದ್ದರು. ಅದರೆ ಕಳ್ಳರು ಚೀಲ ತೆರೆದು ನೋಡಿದಾಗ ಅದರಲ್ಲಿದ್ದುದು ಕೇವಲ ಐದು ರೂಪಾಯಿಯ ನಾಣ್ಯ. ಕಳ್ಳರು ಉದ್ಯಮಿಯ ಕಿಸೆಯನ್ನಾದರೂ ಹುಡುಕಿದ್ದರೆ ಅವರಿಗೆ ರೂ 10,000 ನಗದು ದೊರಕುತ್ತಿತ್ತು. ಸ್ಕೂಟರ್ ನಲ್ಲಿನ ಪೆಟ್ಟಿಗೆಯಲ್ಲಾದರೂ ನಗದು ಇರಬಹುದೆಂದುಕೊಂಡಿದ್ದರೆ ಅದು ಕೂಡ ಇರಲಿಲ್ಲ. ಕದ್ದ ವಾಹನ ಮಾರಾಟ ಮಾಡಿ ಗೊತ್ತಿಲ್ಲದ ಅವರಿಗೆ ಅದನ್ನೂ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸ್ಕೂಟರ್ ಪೊಲೀಸರ ವಶದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News