×
Ad

ಕುಲಶೇಖರ ಬಳಿ 2 ಮನೆಗೆ ಹಾನಿ: ಓರ್ವನಿಗೆ ಗಾಯ; ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆ

Update: 2018-08-10 20:24 IST

ಮಂಗಳೂರು, ಆ.10: ದ.ಕ.ಜಿಲ್ಲೆಯ ಮಂಗಳೂರು, ಉಳ್ಳಾಲ, ತೊಕ್ಕೊಟ್ಟು, ಸುರತ್ಕಲ್, ಮೂಡುಬಿದಿರೆ, ಬಂಟ್ವಾಳ ಮತ್ತಿತರ ಕಡೆ ಶುಕ್ರವಾರ ದಿನವಿಡೀ ಗಾಳಿ ಮಳೆ ಸುರಿದಿದೆ. ಗುರುವಾರ ಮೋಡ ಕವಿದ ವಾತಾವರಣದ ಮಧ್ಯೆ ಅಪರಾಹ್ನದ ಬಳಿಕ ಮಳೆ ಸುರಿದಿದ್ದರೆ, ಶುಕ್ರವಾರ ಮುಂಜಾನೆಯಿಂದಲೇ ಸುರಿಯಲು ಆರಂಭಿಸಿದ ಮಳೆ ರಾತ್ರಿಯವರೆಗೂ ಸುರಿದಿತ್ತು.

ಶುಕ್ರವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ನಗರದ ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದರೆ, ಕುಲಶೇಖರ ಬಳಿ ಕಾಂಪೌಂಡ್ ಹಾಲ್ ಕುಸಿದ ಪರಿಣಾಮ ಎರಡು ಮನೆಗೆ ಹಾನಿಯಾಗಿದೆಯಲ್ಲದೆ ಯುವಕನೊಬ್ಬನಿಗೆ ಗಾಯವಾಗಿದೆ.

ಕೃತಕ ನೆರೆ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ನೆರೆ ನೀರು ಅಂಗಡಿ ಮುಂಗಟ್ಟಿಗೆ ನುಗ್ಗಿತ್ತು. ಸಾರ್ವಜನಿಕರ ಓಡಾಟ ಮಾತ್ರವಲ್ಲ ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದರು.

ರಾ.ಹೆ.66ರ ಕೊಟ್ಟಾರ ಚೌಕಿಯಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆಯಿಂದ ರಾಜಕಾಲುವೆಗೆ ಸೇರುವ ದಾರಿಯಲ್ಲಿ ಮಣ್ಣು ಅಥವಾ ಇತರ ವಸ್ತುಗಳಿಂದ ಚರಂಡಿ ಬ್ಲಾಕ್ ಆಗಿದ್ದರಿಂದ ಕೃತಕ ನೆರೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಾಂಪೌಂಡ್ ಕುಸಿತ: ನಗರದ ಕುಲಶೇಖರ ಬಳಿಯ ಕಕ್ಕೆಬೆಟ್ಟು ಎಂಬಲ್ಲಿ ಆವರಣ ಗೋಡೆ ಕುಸಿದ ಪರಿಣಾಮ ಯುವಕನೊಬ್ಬನಿಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆವರಣ ಗೋಡೆ ಕುಸಿತದಿಂದ ಸ್ಟಾನ್ಲಿ ಮತ್ತವರ ಮನೆಗೆ ಹಾನಿಯಾಗಿದೆ. ಗಾಯಾಳುವನ್ನು ರಂಜಿತ್ (28) ಎಂದು ಗುರುತಿಸಲಾಗಿದೆ.

ಮರ ತೆರವು: ಕೊಣಾಜೆ ಠಾಣಾ ವ್ಯಾಪ್ತಿಯ ಬೊಳಿಯಾರ್ ಗ್ರಾಮದ ಚೇಳೂರು ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿ ಬಿತ್ತು. ಇದರಿಂದ ಸಂಚಾರಕ್ಕೆ ತೊಂದರೆಯಾಗುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮರವನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದರು.

ಭಾರೀ ಮಳೆ: ಮುಂದಿನ 5ದಿನಗಳವರೆಗೆ ದ.ಕ.ಜಿಲ್ಲೆಯ ವಿವಿಧೆಡೆ ಭಾರೀ ಅಂದರೆ ಸರಾಸರಿ 64.5 ಮಿ.ಮೀ. ನಷ್ಟು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News