×
Ad

ಬೋಂದೆಲ್ ಸಂತ ಲಾರೆನ್ಸ್ ಚರ್ಚ್, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Update: 2018-08-10 20:34 IST

ಮಂಗಳೂರು, ಆ. 10: ಸಂತ ಲಾರೆನ್ಸ್ ಅವರು ಕ್ರೈಸ್ತ ಸಭೆಯ ಮೊದಲ ರಕ್ತ ಸಾಕ್ಷಿಯಾಗಿದ್ದರು. ಬಡವರು ಮತ್ತು ದೀನ ದಲಿತರು ಕ್ರೆಸ್ತ ಸಭೆಯ ಆಸ್ತಿ ಎಂದು ಹೇಳಿ ಅದಕ್ಕೆ ಬದ್ಧರಾಗಿ ನಡೆದುಕೊಂಡದ್ದಕ್ಕಾಗಿ ಅವರು ಹುತಾತ್ಮರಾಗಿದ್ದರು. ದೇವರ ಮೇಲೆ ಅಖಂಡ ವಿಶ್ವಾಸವಿದ್ದ ಅವರಿಗೆ ಪ್ರಾರ್ಥನೆಯು ಕಷ್ಟ ಸಂಕಷ್ಟಗಳನ್ನು ಎದುರಿಸಲು ಪ್ರಮುಖ ಶಕ್ತಿಯಾಗಿತ್ತು. ಅವರ ಬದುಕು ನಮಗೆಲ್ಲರಿಗೆ ಆದರ್ಶವಾಗಿದೆ ಎಂದು ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.

ನಗರದ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಬಲಿ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಜಪ್ಪು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ಫಾ. ರೊನಾಲ್ಡ್ ಸೆರಾವೊ ಪ್ರವಚನ ನೀಡಿದರು. ಬೋಂದೆಲ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಆ್ಯಂಡ್ರೂ ಲಿಯೋ ಡಿಸೋಜ ಸ್ವಾಗತಿಸಿ, ವಂದಿಸಿದರು. ಬಲಿ ಪೂಜೆಯಲ್ಲಿ 20ಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಿದ್ದರು.

ಸಹಾಯಕ ಗುರುಗಳಾದ ಫಾ. ಕ್ಲಿರ್ಡ್ ಸೈಮನ್ ಪಿಂಟೊ ಮತ್ತು ಫಾ.ಲಿಯೋ ವೇಗಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆನ್ಬರ್ಟ್ ಪಿಂಟೊ, ಕಾರ್ಯದರ್ಶಿ ಫ್ರಾನ್ಸಿಸ್ ವೇಗಸ್, ಮಹೋತ್ಸವ ಸಮಿತಿಯ ಸಂಯೋಜಕ ರೂಡಿ ಪಿಂಟೊ, ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಟ್ಯಾನಿ ಅಲ್ವಾರಿಸ್, ಸದಸ್ಯ ಲ್ಯಾನ್ಸಿ ಡಿಕುನ್ಹಾ ಉಪಸ್ಥಿತರಿದ್ದರು.

ಆ.1ರಿಂದ ನಡೆದ ವಾರ್ಷಿಕ ಮಹೋತ್ಸವದ ಸಮಾರೋಪ ಸಂಜೆ ಧರ್ಮ ಪ್ರಾಂತದ ನಿಯೋಜಿತ ಬಿಷಪ್ ರೆ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರ ನೇತೃತ್ವದ ಬಲಿಪೂಜೆಯೊಂದಿಗೆ ಸಮಾರೋಪಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News