×
Ad

ದಿಲ್ಲಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ಅರಿತ ಸಿಬ್ಬಂದಿ ನೇಮಿಸಲು ಆಗ್ರಹ

Update: 2018-08-10 20:58 IST

ಮಂಗಳೂರು, ಆ.10: ದಿಲ್ಲಿಯ ಭಾಷಾ ಶಾಲೆಗಳಲ್ಲಿ ಆಯಾ ರಾಜ್ಯಗಳ ಭಾಷೆ ಬಲ್ಲವರನ್ನು ಮಾತ್ರ ಸಿಬ್ಬಂದಿಯಾಗಿ ನೇಮಿಸಬೇಕು. ಅದರಂತೆ ದಿಲ್ಲಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ಅರಿತ ಸಿಬ್ಬಂದಿ ನೇಮಿಸಲು ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾಗೆ ದಿಲ್ಲಿ ಕರ್ನಾಟಕ ಸಂಘ ಮನವಿ ಸಲ್ಲಿಸಿದೆ.

ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, ದೂರದ ದಿಲ್ಲಿಯಲ್ಲಿ ಭಾಷಾ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳು ತಮ್ಮ ಮಾತೃಭಾಷೆ ಕಲಿಯಲು ಸಹಾಯಕಾರಿ ಯಾಗಲಿದೆ. ದಿಲ್ಲಿ ಕನ್ನಡ ವಿದ್ಯಾಸಂಸ್ಥೆಯನ್ನು ಕನ್ನಡದ ಸಂಸ್ಕತಿಯನ್ನು ಪರಿಚಯಿಸಲು ಆರಂಭಿಸಲಾಗಿದೆ.

ಹೀಗಾಗಿ ಕನ್ನಡ ಶಾಲೆಯಲ್ಲಿ ಕನ್ನಡ ಅರಿತ ಸಿಬ್ಬಂದಿಯನ್ನು ನೇಮಿಸಿದಾಗ ಅವರು ಕನ್ನಡ ಶಾಲೆಗೆ ಬರುವ ಕನ್ನಡದ ಮಕ್ಕಳೊಂದಿಗೆ ಸಂವಹನ ಮಾಡಲು ಅನುಕೂಲವಾಗುತ್ತದೆ. ಆ ಮೂಲಕ ಕನ್ನಡ ಶಾಲೆಯನ್ನು ಆರಂಭಿಸಿದ ಉದ್ದೇಶ ಸಾರ್ಥಕವಾಗುವುದು ಎಂದು ಅವರು ತಿಳಿಸಿದರು.

ದಿಲ್ಲಿಯಲ್ಲಿ ಕನ್ನಡ ಅಕಾಡೆಮಿ ಸ್ಥಾಪನೆಗೆ ಮುಂದಾದ ದಿಲ್ಲಿ ಸರಕಾರದ ಕ್ರಮಕ್ಕಾಗಿ ದಿಲ್ಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ಉಪಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ, ‘ನಿಮ್ಮ ಬೇಡಿಕೆ ಸೂಕ್ತವಾಗಿದೆ.ಆದರೆ, ಈ ಬಗ್ಗೆ ವಿವರವಾದ ಚರ್ಚೆಅಗತ್ಯವಾಗಿದೆ. ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಾದೇಶಿಕ ಭಾಷೆಗಳ ಅಕಾಡಮಿಗಳನ್ನು ಸ್ಥಾಪಿಸುವ ಮೂಲಕ ದಿಲ್ಲಿಯಲ್ಲಿ ಎಲ್ಲ ಭಾಷಿಕರಿಗೆ ಮಾನ್ಯತೆ ನೀಡುವ ಪ್ರಯತ್ನ ಮಾಡಲಾಗಿದೆ. ದಿಲ್ಲಿಯಲ್ಲಿ ಎಲ್ಲ ಭಾಷಿಕರೂ ನೆಲೆಸಿ, ದಿಲ್ಲಿಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅವರು ತಿಳಿಸಿದರು. ಅಕ್ಟೋಬರ್ 2ರಂದು ದಿಲ್ಲಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ನಡೆಯಲಿರುವ ‘ಅಂತರರಾಷ್ಟ್ರೀಯ ಸಮ್ಮೇಳನ’ಕ್ಕೆ ದಿಲ್ಲಿ ಸರಕಾರದಿಂದ ಆರ್ಥಿಕ ನೆರವು ಯಾಚಿಸಲಾಯಿತು. ನಿಯೋಗದಲ್ಲಿ ದಿಲ್ಲಿ ಸರಕಾರದ ಜಿಎಸ್‌ಟಿ ಕಮಿಷನರ್ ಆಗಿರುವ ರಾಜೇಶ್ ಪ್ರಸಾದ್ ಹಿರಿಯಡ್ಕ, ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ, ಖಜಾಂಚಿ ಕೆ.ಎಸ್.ಜಿ. ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾದ ಟಿ.ಪಿ. ಬೆಳ್ಳಿಯಪ್ಪ, ಜಮುನಾ ಸಿ.ಮಠದ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಧಾಕೃಷ್ಣ, ಪೂಜಾ ಪಿ.ರಾವ್, ವಿ.ವಿ. ಬಿರಾದಾರ ಯಕ್ಷಧ್ರುವದ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಖಜಾಂಚಿ ಕೃಷ್ಣರಾಜ್ ಕೆ.ಎನ್., ಸದಸ್ಯರಾದ ರಾಘವೇಂದ್ರ ನಾಯ್ಕಿ, ಮಿತೇಶ್ ಶೆಟ್ಟಿ ಹಾಗೂ ಸಂಘದ ಹಿರಿಯ ಸದಸ್ಯ ಚೆನ್ನು ಎಸ್. ಮಠದ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News