ರಫೇಲ್ ಒಪ್ಪಂದದ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಆಗ್ರಹ: ಸೋನಿಯಾ ನೇತೃತ್ವದಲ್ಲಿ ಸಂಸದರ ಧರಣಿ

Update: 2018-08-10 15:28 GMT

ಹೊಸದಿಲ್ಲಿ, ಆ. 10: ಫ್ರಾನ್ಸ್‌ನೊಂದಿಗಿನ ಯುದ್ಧ ವಿಮಾನ ರಫೇಲ್ ಒಪ್ಪಂದದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸದರು ಸಂಸತ್ ಸಂಕೀರ್ಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರು.

ರಾಜ್‌ಬಬ್ಬರ್, ಗುಲಾಂ ನಬಿ ಆಝಾದ್, ಆನಂದ್ ಶರ್ಮಾ, ಅಂಬಿಕಾ ಸೋನಿ, ಸಿಪಿಐಯ ರಾಜಾ, ಎಎಪಿ ಸಂಸದ ಸುಶೀಲ್ ಗುಪ್ತಾ ಹಾಗೂ ಇತರರು ಸೇರಿದಂತೆ ಪ್ರತಿಪಕ್ಷದ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್, ಸಿಬಿಐ, ಆರ್‌ಜೆಡಿ, ಎಎಪಿಯಂತಹ ಪಕ್ಷಗಳ ಸಂಸದರು ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದರು. ಲೋಕಸಭೆಯಲ್ಲಿ ಪ್ರತಿಪಕ್ಷದ ಸಂಸದರು ರಫೇಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ಸ್ಥಾಪಿಸುವಂತೆ ಕೋರಿ ಘೋಷಣೆಗಳನ್ನು ಕೂಗಿದರು.

ರಾಜ್ಯಸಭೆಯಲ್ಲಿ ರಫೇಲ್ ಒಪ್ಪಂದದ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಸದಸ್ಯರು ಕೋರಿದರು. ತಮ್ಮ ಪ್ರತಿಪಾದನೆಯನ್ನು ಬೆಂಬಲಿಸುವ ಪುರಾವೆಗಳು ಇಲ್ಲ ಎಂದು ಪ್ರತಿಪಾದಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರತಿಪಕ್ಷದ ಬೇಡಿಕೆ ತಿರಸ್ಕರಿಸಿದರು. ಇದರಿಂದ ಪ್ರತಿಪಕ್ಷದ ಸದಸ್ಯರು ಧರಣಿ ನಡೆಸಲು ಕಾರಣವಾಯಿತು. ರಫೇಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಲೋಕಸಭೆಯಲ್ಲಿ ಆಗ್ರಹಿಸಿದ್ದ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಕೋಲಾಹಲದ ಸನ್ನಿವೇಶ ನಿರ್ಮಾಣ ಮಾಡಿದ್ದರು. ಇದು ಕಲಾಪ ಮುಂದೂಡಲು ಕಾರಣವಾಗಿತ್ತು. ವ್ಯಾಪಾರದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದರು. ಸಂಸತ್ತಿನ ಮುಂಗಾರು ಅಧಿವೇಶನ ಸೇರಿದಂತೆ ಕಳೆದ ಹಲವು ತಿಂಗಳು ರಫೇಲ್ ಯುದ್ಧ ವಿಮಾನ ಒಪ್ಪಂದದ ವಾಗ್ವಾದ ನಡೆಯುತ್ತಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News