ಮಂಗಳೂರು:ಪಾಲಿಕೆಯಿಂದ ಸಹಾಯಧನ ಚೆಕ್ ವಿತರಣೆ
ಮಂಗಳೂರು, ಆ.10: ಮಹಾನಗರ ಪಾಲಿಕೆಯ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಯಿಂದ ಶೇ.3ರ ಮೀಸಲು ನಿಧಿಯ ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ಸಹಾಯಧನದ ಚೆಕ್‌ನ್ನು ಪಾಲಿಕೆಯ ಬಡತನ ನಿರ್ಮೂಲನೆ ಕೋಶದ ಸಭಾಂಗಣದಲ್ಲಿ ವಿತರಿಸಲಾಯಿತು.
ವಿಕಲಚೇತನರನ್ನು ಜವಾಬ್ದಾರಿಯಿಂದ ಪೋಷಿಸುವ 35 ಪೋಷಕರಿಗೆ ತಲಾ 6,000 ರೂ.ಯಂತೆ 2,10,000 ರೂ., ಎಂಟು ವಿಕಲಚೇತನ ಫಲಾನುಭವಿಗಳಿಗೆ 72,731 ರೂ. ವೈದ್ಯಕೀಯ ಸಹಾಯಧನ ಮತ್ತು ಅಂಗವಿಕಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎರಡು ಸಂಸ್ಥೆಗಳಿಗೆ ತಲಾ 15 ಸಾವಿರ ರೂ.ಯಂತೆ 30 ಸಾವಿರ ಸೇರಿ ಒಟ್ಟು 3,12,731 ರೂ. ಸಹಾಯಧನ ನೀಡಲಾಯಿತು.
ಶೇ.7.25ರ ಇತರ ಬಡಜನರ ಕಲ್ಯಾಣ ಕಾರ್ಯಕ್ರಮದಡಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಓರ್ವ ಪ್ರತಿಭಾವಂತ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ಹಾಗೂ 50 ಸಾವಿರ ರೂ. ಸಹಾಯಧನದ ಚೆಕ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮನಪಾ ಉಪಮೇಯರ್ ಮುಹಮ್ಮದ್ ಮಾತನಾಡಿ, ವಿಕಲಚೇತನರು ಕೀಳರಿಮೆಯಿಂದ ಹೊರಬರಬೇಕು. ಸಮಾಜದ ಮುಖ್ಯವಾಹಿನಿ ಯಲ್ಲಿ ಇದ್ದುಕೊಂಡು ಉತ್ತಮ ಜೀವನವನ್ನು ನಡೆಸಬೇಕು. ವಿಕಲಚೇತನರಿಗಾಗಿ ಮನಪಾದ ಬೆಂಬಲ ಸದಾ ಇರುತ್ತದೆ ಎಂದರು.
ಮನಪಾ ಸಚೇತಕ ಶಶಿಧರ್ ಹೆಗ್ಡೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ನವೀನ್ ಡಿಸೋಜ, ಸಮುದಾಯ ವ್ಯವಹಾರಗಳ ಅಧಿಕಾರಿ ಮಾಲಿನಿ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.