ಕಾರ್ಯಾಚರಣೆ ಆರಂಭಿಸಿದ ಭಾರತದ ಮೊದಲ ಮಹಿಳಾ ಕಮಾಂಡೊ ತಂಡ

Update: 2018-08-10 16:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ. 10: ಕಳೆದ ಒಂದು ವರ್ಷಗಳಿಗಿಂತಲೂ ಅಧಿಕ ಕಾಲ ಕಟ್ಟಡ ಏರುವಿಕೆ, ಬಾಂಬ್ ನಿಷ್ಕ್ರಿಯಗೊಳಿಸುವುದು, ಒತ್ತೆಯಾಳುಗಳನ್ನು ರಕ್ಷಿಸುವ ತರಬೇತಿ ಪಡೆಯುತ್ತಿರುವ ಭಾರತದ ಮೊದಲ ಮಹಿಳಾ ಕಮಾಂಡೊ ತಂಡ ಶುಕ್ರವಾರ ತನ್ನ ಕಾರ್ಯ ಆರಂಭಿಸಿದೆ.

 ಇದರೊಂದಿಗೆ ಸೇನೆ ಪುರುಷರಿಗೆ ಮಾತ್ರ ಸೀಮಿತ ಎಂಬ ಸಾಂಪ್ರದಾಯಿಕ ನಿಲುವಿನ ಕೋಟೆಯನ್ನು ಛಿದ್ರಗೊಳಿಸಿದೆ. 36 ಮಹಿಳೆಯರ ವಿಶೇಷ ಶಸ್ತ್ರಾಸ್ತ್ರ ಹಾಗೂ ಹಾಗೂ ತಂತ್ರಗಾರಿಕೆ ತಂಡ (ಸ್ಪೆಷಲ್ ವೆಪನ್ಸ್ ಆ್ಯಂಡ್ ಟ್ಯಾಕ್ಟಿಸ್ ಟೀಮ್-ಎಸ್‌ಡುಬ್ಲುಎಟಿ) ಶಸ್ತ್ರಾಸ್ತ್ರ ನಿರ್ವಹಣೆ, ಭಯೋತ್ಪಾದನೆ ನಿಯಂತ್ರಣ, ಇಸ್ರೇಲ್ ಭದ್ರತಾ ಪಡೆ ಆರಂಭಿಸಿದ ಸೇನಾ ಸ್ವಯಂ ರಕ್ಷಣಾ ತಂತ್ರ-ಕ್ರವ್ ಮಾಗಾದಲ್ಲಿ ಕಳೆದ 15 ತಿಂಗಳಿಂದ ತರಬೇತಿ ಪಡೆದಿದೆ. ದೇಶದ ರಾಜಧಾನಿಯ ಐವರು ಪುರುಷ ಕಮಾಮಂಡೊಗಳೊಂದಿಗೆ ಒರ್ವ ಮಹಿಳಾ ಕಮಾಂಡೊ ಕಾರ್ಯ ನಿರ್ವಹಿಸಲಿದ್ದಾರೆ ಎಂದು ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿ ಪ್ರಮೋದ್ ಕುಶ್ವಾಹ್ ತಿಳಿಸಿದ್ದಾರೆ.

‘‘ಈ ಮಹಿಳೆಯರು ಪುರುಷರ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.’’ ಎಂದು ಅವರು ತಿಳಿಸಿದ್ದಾರೆ. ‘‘ಮಹಿಳೆಯರಿಗೆ ಇದನ್ನು ಮಾಡಲು ಸಾಧ್ಯ. ಇದನ್ನು ಮಾಡಲು ಸಾಧ್ಯವಿಲ್ಲ ಎಂಬ ಪೂರ್ವಾಗ್ರಹ ಸಾಮಾನ್ಯವಾಗಿ ಜನರಲ್ಲಿ ಇರುತ್ತದೆ. ಆದರೆ, ಮಹಿಳೆಯರು ಪುರುಷರಿಗೆ ಸಮಾನವಾಗಿ ಹಾಗೂ ಪುರುಷರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ’’ ಎಂದು ಅವರು ತಿಳಿಸಿದ್ದಾರೆ. ಭಾರತೀಯ ಪೊಲೀಸ್ ಪಡೆಯಲ್ಲಿ ಪುರುಷರ ಪ್ರಾಬಲ್ಯವಿದೆ. ಒಟ್ಟು ಪೊಲೀಸ್ ಅಧಿಕಾರಿಗಳಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಸಂಖ್ಯೆ ಕೇವಲ ಶೇ. 7.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News