ಆಶ್ರಮಗಳಲ್ಲಿ ಅತ್ಯಾಚಾರ ಪ್ರಕರಣ: ಸುಪ್ರೀಂ ಕಳವಳ

Update: 2018-08-10 16:51 GMT

ಹೊಸದಿಲ್ಲಿ, ಆ.10: ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಇಂತಹ ಭಯಾನಕ ಘಟನೆಗಳು ಯಾವಾಗ ಕೊನೆಯಾಗಬ   ಹುದು ಎಂದು ಪ್ರಶ್ನಿಸಿದೆ.

ಅನಾಥಾಲಯಗಳಲ್ಲಿ ವಾಸಿಸುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭ ಸರ್ವೋಚ್ಛ ನ್ಯಾಯಾಲಯ ಈ ಪ್ರಶ್ನೆ ಮುಂದಿರಿಸಿದೆ. ಉತ್ತರಪ್ರದೇಶದ ಪ್ರತಾಪಗಢದಲ್ಲಿರುವ ಆಶ್ರಮವೊಂದರ 26 ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠವು, ಇಂತಹ ಪ್ರಕರಣಗಳು ಎಂದು ಕೊನೆಗೊಳ್ಳಬಹುದು ಎಂದು ಪ್ರಶ್ನಿಸಿತು. ದೇಶದಲ್ಲಿರುವ ಬಾಲಸುರಕ್ಷಾ ಮಂದಿರಗಳ ಪಟ್ಟಿಯನ್ನು ಹಾಗೂ ಅವುಗಳ ಆಡಿಟ್ ವರದಿಯ ಕುರಿತ ವಿವರವನ್ನು ಸಲ್ಲಿಸುವುದಾಗಿ ಕೇಂದ್ರ ಸರಕಾರ ತಿಳಿಸಿದೆ ಎಂದು ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಕರಿಸುತ್ತಿರುವ ನ್ಯಾಯವಾದಿ ಅಪರ್ಣಾ ಭಟ್ ನ್ಯಾಯಾಲಯದ ಗಮನಕ್ಕೆ ತಂದರು.

 ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯ ಅನುಪಸ್ಥಿತಿಯನ್ನು ನ್ಯಾಯಾಲಯ ಪ್ರಶ್ನಿಸಿತು. ಬಳಿಕ ಗೃಹ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಪರ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಹಾಜರಾದರು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿಗಳ ಉಪಸ್ಥಿತಿ ಮಾತ್ರ ಅಗತ್ಯವಿದೆ ಎಂದು ಈ ಸಂದರ್ಭ ನ್ಯಾಯಾಲಯ ತಿಳಿಸಿತು. ಬಾಲ ಸುರಕ್ಷಾ ಸಂಸ್ಥೆಗಳ ಲೆಕ್ಕಪತ್ರ ಪರಿಶೋಧನೆಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ದ ಮೂಲಕ ನಡೆಸುವಂತೆ ಕಳೆದ ವರ್ಷ ಕೇಂದ್ರ ಸರಕಾರಕ್ಕೆ ಸೂಚಿಸಿರುವುದನ್ನು ಅಮಿಕಸ್ ಕ್ಯೂರಿ ಪ್ರಸ್ತಾವಿಸಿದರು. ಲೆಕ್ಕಪತ್ರ ಪರಿಶೋಧನೆ ನಡೆಸಲಾಗಿದೆಯೇ ಎಂದು ನ್ಯಾಯಪೀಠ ಎನ್‌ಸಿಪಿಸಿಆರ್ ಪ್ರತಿನಿಧಿಗಳನ್ನು ಪ್ರಶ್ನಿಸಿತು. ಬಿಹಾರ, ಉ.ಪ್ರದೇಶ, ಮೇಘಾಲಯ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಮಿರೆರಂ- ಈ ಆರು ರಾಜ್ಯಗಳಲ್ಲಿ ಆಯೋಗಕ್ಕೆ ಲೆಕ್ಕಪತ್ರ ಪರಿಶೋಧನೆ ನಡೆಸಲು ಅವಕಾಶ ನೀಡಿಲ್ಲ ಎಂದು ಎನ್‌ಸಿಪಿಸಿಆರ್ ಪ್ರತಿನಿಧಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News