ಹೆಜಮಾಡಿಯಲ್ಲಿ ಕಡಲ್ಕೊರೆತ: ಶಾಸಕರ ಭೇಟಿ

Update: 2018-08-10 17:55 GMT

ಪಡುಬಿದ್ರೆ, ಆ. 10 : ಹೆಜಮಾಡಿಯ ಅಮವಾಸ್ಯೆಕರಿಯ ದಕ್ಷಿಣ ಭಾಗ ಬಳಿ ಕಡಲ್ಕೊರೆತ ಕಾಣಿಸಿಕೊಂಡ ಪ್ರದೇಶಕ್ಕೆ ಶಾಸಕ ಲಾಲಾಜಿ ಮೆಂಡನ್ ಶುಕ್ರವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಾಲಾಜಿ ಮೆಂಡನ್, ತಾತ್ಕಾಲಿಕ ತಡೆಗೋಡೆ ನಿರ್ಮಾಣವಗುತಿದ್ದು, ಮಳೆಗಾಲ ಮುಗಿದ ಬಳಿಕ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಈಗಾಗಲೇ ಪಡುಬಿದ್ರಿ, ಎರ್ಮಾಳು ತೆಂಕ, ಉಚ್ಚಿಲ ಬಡಾ, ಕಾಪುವಿನ ಕೈಪುಂಜಾಲುವಿನಲ್ಲಿ ಕಡಲ್ಕೊರೆತ ಕಾಣಿಸಿಕೊಂಡ ಸ್ಥಳಗಳಲ್ಲಿಯೂ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವಾಗಲಿದೆ ಎಂದರು.

ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಕ್ಷೇವಿಯರ್ ಡಯಾಸ್ ಪತ್ರಕರ್ತರೊಂದಿಗೆ ಮಾತನಾಡಿ, ಹೆಜಮಾಡಿಯಲ್ಲಿ 350 ಮೀಟರ್, ಪಡುಬಿದ್ರಿಯಲ್ಲಿ 100 ಮೀಟರ್ ಶಾಶ್ವತ ತಡೆಗೋಡೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರ್ಮಾಳು ತೆಂಕ ಹಾಗೂ ಉಚ್ಚಿಲ ಬಡಾದಲ್ಲಿ ಎಡಿಬಿ ಮೂಲಕ ಕಾಮಗಾರಿ ನಡೆಯಲಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.

ಅಮಾಸಕರಿಯ ಬಳಿ ಹಲವು ತೆಂಗಿನ ಮರಗಳು, ಗಾಳಿ ಮರಳು ಸಮುದ್ರ ಪಾಲಾಗಿದ್ದು, ಈ ಭಾಗದಲ್ಲಿರುವ ವಿದ್ಯುತ್ ಕಂಬಗಳು, ಮೀನುಗಾರಿಕಾ ರಸ್ತೆ ಅಪಾಯದಂಚಿನಲ್ಲಿದೆ. 30ವರ್ಷಗಳ ಹಿಂದೆ ಸಮುದ್ರಕ್ಕೆ ಹಾಕಕಾದ ತಡೆಗೋಡೆಗಳು ಸಮುದ್ರದ ಒಡಲು ಸೇರಿದೆ. ಸಮುದ್ರಕ್ಕೆ ಬೃಹತ್ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವಾಗುತಿದೆ. ಈಗಾಗಲೇ 30ಕ್ಕೂ ಅಧಿಕ ಟಿಪ್ಪರ್‌ಗಳಲ್ಲಿ ಕಲ್ಲುಗಳನ್ನು ತಂದು ಸುರಿಯಲಾಗುತ್ತಿದೆ.

ಶಾಸಕರ ಭೇಟಿ: ಶಾಸಕ ಲಾಲಾಜಿ ಆರ್.ಮೆಂಡನ್ ಶುಕ್ರವಾರ ಸಂಜೆ ಕಡಲ್ಕೊರೆತ ಕಾಣಿಸಿಕೊಂಡ ಹೆಜಮಾಡಿಯ ಅಮಾಸಕರಿಯಕ್ಕೆ ಭೇಟಿ ನೀಡಿದರು.
ಸಹಾಯಕ ಎಂಜಿನಿಯರ್ ಜಯಂತ್, ಹೆಜಮಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಜಿಲ್ಲಾ ಪಂಚಾಯ್ತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಪಿಡಿಒ ಮಮತಾ ಶೆಟ್ಟಿ, ಗ್ರಾಪಂ ಸದಸ್ಯರಾದ ಅಬ್ದುರ್ರಹ್ಮಾನ್ ಪುತ್ತು, ಮೋನು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಾಂಡುರಂಗ ಕರ್ಕೇರ, ಶರಣ್ ಕುಮಾರ್ ಮಟ್ಟು, ಯಾದವ್, ಸನಾ ಇಬ್ರಾಹಿಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News