ರಜೆ ಘೋಷಿಸಿದ್ದ ದ.ಕ. ಜಿಲ್ಲಾ ಡಿಸಿ ಆದೇಶವನ್ನೇ ತಿರುಚಿದ ಕಿಡಿಗೇಡಿಗಳು !
ಮಂಗಳೂರು, ಆ. 11: ದ.ಕ. ಜಿಲ್ಲಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದ ಪ್ರತಿಯನ್ನೇ ಕಿಡಿಗೇಡಿಗಳು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಘಟನೆ ವರದಿಯಾಗಿದೆ.
ಶುಕ್ರವಾರ ದ.ಕ. ಜಿಲ್ಲಾದ್ಯಂತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆ ಆ.11ರಂದು ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ರಜೆಯನ್ನು ಘೋಷಿಸಿದ್ದಾರೆ ಎಂದು ಜಿಲ್ಲಾಧಿಕಾರಿಯ ಆದೇಶದ ಪ್ರತಿಯನ್ನು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯು ಸಹಿ ಹಾಕಿದ್ದ ಪ್ರತಿಯನ್ನು ಮಾಧ್ಯಮದವರಿಗೆ ನೀಡಿದ್ದರು. ಅದೇ ಪ್ರತಿಯನ್ನು ತಿದ್ದುಪಡಿ ಮಾಡಿರುವ ಕಿಡಿಗೇಡಿಗಳು, ‘ಜಿಲ್ಲಾಧಿಕಾರಿ ರಜೆಯನ್ನು ರದ್ದುಗೊಳಿಸಿದ್ದಾರೆ’ ಎಂದು ಬದಲಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
‘ಶಾಲಾ ರಜೆಯ ವಿಷಯದಲ್ಲಿ ಗೊಂದಲ ಉಂಟಾಗಬಾರದು ಎಂದು ಶುಕ್ರವಾರ ಸಹಿ ಮಾಡಿ ಪ್ರಕಟನೆ ನೀಡಲಾಗಿತ್ತು. ಈ ಹಿಂದೆ, ರಜೆ ವಿಷಯದಲ್ಲಿ ಟೈಪಿಸಿ ಕಳುಹಿಸಿದ ಸಂದೇಶಗಳು ಎಷ್ಟೋ ಬಾರಿ ತಿದ್ದಿ, ವಿರುದ್ಧವಾದ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದವು. ಹೀಗಾಗಿ ಶುಕ್ರವಾರ ಸಹಿ ಹಾಕಿ ಪ್ರಕಟನೆ ನೀಡಲಾಗಿತ್ತು. ವಿಪರ್ಯಾಸವೆಂದರೆ, ಅದನ್ನೂ ತಿದ್ದಿ ಹರಡಲಾಗಿದೆ’ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸುಳ್ಳು ಸುದ್ದಿಗಳು ವೈರಲ್ ಆಗುತ್ತಿದ್ದು, ಮೂಲ ಸುದ್ದಿಯನ್ನೇ ತಿರುಚುವ ಘಟನೆಗಳು ಹೆಚ್ಚುತ್ತಿವೆ.