ಕಿರಣ್ ಬೇಡಿ ಗೋಪ್ಯತೆ ಪ್ರಮಾಣದ ಆಶಯವನ್ನು ಉಲ್ಲಂಘಿಸುತ್ತಿದ್ದಾರೆ:ಪುದುಚೇರಿ ಸಿಎಂ

Update: 2018-08-11 15:07 GMT

ಪುದುಚೇರಿ,ಆ.11: ಕಿರಣ್ ಬೇಡಿ ಅವರು ಎಲ್ಲ ರಹಸ್ಯ ಅಧಿಕೃತ ಸಂವಹನಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಗೋಪ್ಯತೆ ಪ್ರಮಾಣದ ಆಶಯವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಇದು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗೆ ಅನುಚಿತವಾಗಿದೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

 ‘ನೀವು ಅಧಿಕಾರ ಮತ್ತು ಗೋಪ್ಯತೆ ಪ್ರಮಾಣವಚನವನ್ನು ಸ್ವೀಕರಿಸಿದ್ದೀರಿ’ ಎಂದು ಶುಕ್ರವಾರ ಬೇಡಿಯವರಿಗೆ ಬರೆದಿರುವ ಪತ್ರದಲ್ಲಿ ಬೆಟ್ಟುಮಾಡಿರುವ ನಾರಾಯಣಸ್ವಾಮಿ, ‘ಅದನ್ನು ಉಲ್ಲಂಘಿಸಿ ಗೋಪ್ಯ ಅಧಿಕೃತ ಸಂವಹನಗಳನ್ನು ಬಯಲು ಮಾಡುತ್ತಿದ್ದೀರಿ’ ಎಂದು ಆಕ್ಷೇಪಿಸಿದ್ದಾರೆ.

 ಮುಖ್ಯಮಂತ್ರಿಗಳು ತನ್ನ ಪತ್ರದ ಪ್ರತಿಗಳನ್ನು ಶನಿವಾರ ಇಲ್ಲಿ ಸುದ್ದಿಗಾರರಿಗೆ ವಿತರಿಸಿದರು.

ಬೇಡಿಯವರು ಪ್ರತಿದಿನ ಯಾವುದೇ ಅಧಿಕಾರವಿಲ್ಲದೆ ಆದೇಶಗಳನ್ನು ಹೊರಡಿಸುತ್ತಿದ್ದು,ಇದು ಅಧಿಕಾರಿಗಳಲ್ಲಿ ಗೊಂದಲವನ್ನಷ್ಟೇ ಉಂಟುಮಾಡಿದೆ ಎಂದ ಅವರು,ಅಧಿಕಾರಿಗಳು ಲೆಫ್ಟಿನೆಂಟ್ ಗವರ್ನರ್‌ರ ಆದೇಶಗಳನ್ನು ಪಾಲಿಸಬೇಕಿಲ್ಲ ಮತ್ತು ಅವುಗಳನ್ನು ಕಡೆಗಣಿಸಬಹುದು ಎಂದರು.

ಕಳೆದೆರಡು ವರ್ಷಗಳಿಂದ ಹಲವಾರು ವಿಷಯಗಳಲ್ಲಿ ಸರಕಾರ ಮತ್ತು ಬೇಡಿ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ.

ಸಚಿವ ಸಂಪುಟದ ಸಲಹೆಯ ಮೇರೆಗೆ ಬೇಡಿಯವರು ಕಾರ್ಯ ನಿರ್ವಹಿಸಿದರೆ ಮಾತ್ರ ತಾನು ಅವರಿಗೆ ಸಹಕಾರ ನೀಡಲು ಸಿದ್ಧ ಎಂದೂ ನಾರಾಯಣ ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News