×
Ad

ಎಫ್‌ಐಆರ್ ದಾಖಲಿಸಿದರೆ ಮಾತ್ರ ಸರಿಯಾದ ತನಿಖೆ ಸಾಧ್ಯ: ರವಿಕಿರಣ್

Update: 2018-08-11 21:08 IST

ಉಡುಪಿ, ಆ.11: ಶಿರೂರು ಸ್ವಾಮೀಜಿ ಸಾವಿನ ಬಗ್ಗೆ ಹಲವು ಸಂದೇಹ, ಅನುಮಾನಗಳಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಕೇಳಿಬರುತ್ತಿವೆ. ಆದರೆ ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಯಬೇಕಾದರೆ ಮೊದಲು ಯೋಗ್ಯ ಹಾಗೂ ಕಾನೂನುಬದ್ಧ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಾಗಬೇಕು. ಈವರೆಗೆ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲೇ ಆಗಿಲ್ಲ ಎಂದು ಶಿರೂರು ಶ್ರೀ ಅಭಿಮಾನಿ ಸಮಿತಿಯ ಕಾನೂನು ಸಲಹೆಗಾರ ಹಾಗೂ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ತಿಳಿಸಿದ್ದಾರೆ.

ಶಿರೂರು ಶ್ರೀ ಅಭಿಮಾನಿ ಸಮಿತಿಯ ವತಿಯಿಂದ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಬಳಿಯ ಮಥುರಾ ಛತ್ರದಲ್ಲಿ ನಡೆದ ಸ್ವಾಮೀಜಿ ಸಾವಿನ ಕುರಿತ ಮುಂದಿನ ಹೋರಾಟದ ಕುರಿತ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಇದೀಗ ಈ ಪ್ರಕರಣದ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಅಸ್ವಾಭಾವಿಕ ಮರಣದ ಕುರಿತ ಯುಡಿಆರ್ ಮಾತ್ರ. ನಮಗೆ ಸಾವಿನ ಬಗ್ಗೆ ಸಂಶಯವಿದ್ದರೆ ಕಾನೂನು ಬದ್ಧವಾದ ದೂರನ್ನು ನೀಡಿ ಪ್ರಥಮ ವರ್ತಮಾನ ವರದಿ ದಾಖಲಾಗುವಂತೆ ಮಾಡಬೇಕು. ಆಗ ಮಾತ್ರ ಪೊಲೀಸರಿಗೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಲು ಸಾಧ್ಯವಾಗುತ್ತದೆ ಎಂದರು.

ಮರಣೋತ್ತರ ಪರೀಕ್ಷೆ ವರದಿ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ವಿಷದ ಅಂಶ ಇರುವುದು ಕಂಡು ಬಂದರೆ ಈಗ ದಾಖಲಾಗಿರುವ ಯುಡಿಆರ್‌ನ್ನು ಸ್ವಯಂಪ್ರೇರಿತವಾಗಿ ಪ್ರಥಮ ವರ್ತಮಾನ ವರದಿಯಾಗಿ ಪರಿವರ್ತನೆ ಮಾಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದು ಅರ್ಥ ಇಲ್ಲದ ವಿಚಾರವಾಗಿದೆ ಎಂದು ಅವರು ಹೇಳಿದರು.

ನಾನು ದೂರು ಬರೆದುಕೊಡುತ್ತೇನೆ. ಯಾರಾದಾರೂ ಧೈರ್ಯವಂತರು ಮುಂದೆ ಬಂದು ದೂರು ಕೊಡುವ ಕೆಲಸ ಮಾಡಬೇಕು. ನಾವು ಯಾರ ಮೇಲೆಯೂ ಸಂಶಯ ಇದೆ ಎಂದು ಹೇಳಿ ದೂರು ಕೊಡಬೇಕಾಗಿಲ್ಲ. ಅಪರಾಧ ನಡೆದಿರುವ ಬಗ್ಗೆ ದೂರು ಕೊಟ್ಟರೆ ಸಾಕು. ಮುಂದೆ ಅದನ್ನು ಪತ್ತೆ ಮಾಡುವ ಕೆಲಸ ಪೊಲೀಸರಿಗೆ ಇರುತ್ತದೆ. ದೂರು ನೀಡದಿದ್ದರೆ ನಾವು ಯಾವುದೇ ಹೋರಾಟ ಮಾಡಿದರೂ ವ್ಯರ್ಥವಾಗುತ್ತದೆ ಎಂದರು.

ಈ ಪ್ರಕರಣದ ತನಿಖೆ ವಿಳಂಬವಾದರೆ ಸ್ವಾಮೀಜಿಯ ದೇಹದಲ್ಲಿ ಪತ್ತೆಯಾದ ವಿಷವು ವಿಷವಾಗಿ ಉಳಿಯುವುದಿಲ್ಲ. ಅದು ವಿಷತ್ವವನ್ನೇ ಕಳೆದುಕೊಳ್ಳುತ್ತದೆ. ನಾಳೆ ವಿಷ ಇಲ್ಲ ಎಂದು ವರದಿ ಬಂದರೆ ಅದಕ್ಕೆ ತನಿಖೆಯಲ್ಲಿ ಆಗಿರುವ ವಿಳಂಬವೇ ಕಾರಣವಾಗುತ್ತದೆ. ಆದುದರಿಂದ ಸಕಾಲದಲ್ಲಿ ಎಫ್‌ಐಆರ್ ದಾಖಲು ಮಾಡಬೇಕು ಹಾಗೂ ಪೊಲೀಸರು ವಿಳಂಬ ಮಾಡದೆ ತನಿಖೆ ಮಾಡಬೇಕು ಎಂದು ಅವರು ತಿಳಿಸಿದರು.

ಕೇಮಾರು ಶ್ರೀಈಶ ವಿಠಲ ಸ್ವಾಮೀಜಿ ಮಾತನಾಡಿ, ಪೊಲೀಸ್ ಇಲಾಖೆ ಬೇಧಿಸುವ ನಂಬಿಕೆ ಇದೆ. ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ಆಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹ. ನಮಗೆ ಯಾರ ಬಗ್ಗೆಯೂ ಸಂಶಯ ಇಲ್ಲ. ಅದು ತನಿಖೆಯಿಂದ ಗೊತ್ತಾಗಬೇಕು ಎಂದು ಹೇಳಿದರು.

ಮರಣದ ನಂತರ ಸ್ವಾಮೀಜಿಯನ್ನು ದೂಷಣೆ ಮಾಡುವುದು ಸರಿಯಲ್ಲ. ಯಾಕೆಂದರೆ ಅದಕ್ಕೆ ಉತ್ತರ ನೀಡಲು ಅವರು ಇಲ್ಲ. ಇದು ಯಾರಿಗೂ ಭೂಷಣ ಅಲ್ಲ. 48 ವರ್ಷಗಳ ಕಾಲ ಕೃಷ್ಣ ಪೂಜೆ ಮಾಡಿದ ಮತ್ತು ಮೂರು ಬಾರಿ ಪರ್ಯಾಯ ಪೀಠಾರೋಹಣ ಮಾಡಿರುವ ಸ್ವಾಮೀಜಿಗೆ ಇಂದು ಸಂತಾಪ ಸೂಚಿಸಲು ಹಾಗೂ ಅವರ ಪರ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದರು.

ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮಾತನಾಡಿ, ಸ್ವಾಮೀಜಿ ಸಾವಿನ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳಲಾಗುವುದು. ಆ.18ರಂದು ಸ್ವಾಮೀಜಿಗೆ ಬೃಹತ್ ಶ್ರದ್ಧಾಂಜಲಿ ಸಭೆ ಯನ್ನು ಏರ್ಪಡಿಸಲಾಗುವುದು. ನಂತರ ಸ್ವಾಮೀಜಿ ಸಾವಿನ ತನಿಖೆಯ ಬಗ್ಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಯರಾಮ್ ಅಂಬೆಕಲ್ಲು, ಲಾತವ್ಯ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್‌ನ ಮಾಜಿ ಅಧ್ಯಕ್ಷ ಶಶಿಧರ್, ವಿಜಯ ರಾಘವ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ನವೀನ್ ರಾವ್ ಕಾರ್ಯ ಕ್ರಮ ನಿರೂಪಿಸಿದರು.

ಸಾಮಾಜಿಕ ಜಾಲತಾಣಗಳ ಮೂಲಕ ರಣಹೇಡಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಹೇಡಿಗಳ ಕೃತ್ಯಕ್ಕೆ ನಾನು ಹೆದರುವುದಿಲ್ಲ. ನಮ್ಮಿಂದ ಬೇರೆ ಸ್ವಾಮೀಜಿಗಳಿಗೆ ಅಪಮಾನ ಆಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಕೂಡ ಒಬ್ಬ ಸ್ವಾಮೀಜಿ. ಹಿಂದುಳಿದವರ್ಗದಿಂದ ಬಂದ ಬ್ರಾಹ್ಮಣೇತರ ಸ್ವಾಮೀಜಿ ಎಂಬ ಕಾರಣಕ್ಕೆ ನನ್ನನ್ನು ಇವರು ದೂರಬಹುದೇ ? ನನಗೆ ಅವಮಾನ, ಬೆದರಿಕೆ ಬಂದಾಗ ಇವರು ಯಾಕೆ ಧ್ವನಿ ಎತ್ತುವುದಿಲ್ಲ ಎಂದು ಕೇಮಾರು ಶ್ರೀಈಶ ವಿಠಲ ಸ್ವಾಮೀಜಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News