ಜನಾಂಗೀಯವಾಗಿ ನಿಂದಿಸುವ ಟ್ರಂಪ್: ಶ್ವೇತಭವನದ ಮಾಜಿ ಉದ್ಯೋಗಿಯ ಆರೋಪ

Update: 2018-08-11 16:31 GMT

ವಾಶಿಂಗ್ಟನ್, ಆ. 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯ ನಿಂದನೆಯ ಭಾಷೆಯನ್ನು ಬಳಸಿದ ಹಲವಾರು ಉದಾಹರಣೆಗಳಿವೆ ಎಂದು ಶ್ವೇತಭವನದ ಮಾಜಿ ಮಹಿಳಾ ಉದ್ಯೋಗಿ ಒಮರೊಸಾ ಮ್ಯಾನಿಗಾಲ್ಟ್ ನ್ಯೂಮನ್ ತನ್ನ ಹೊಸ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಪತ್ನಿ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರಿಲ್ಲದೆ ಭಾಗವಹಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಟ್ರಂಪ್ ‘ಸಂಕಲೆಯಿಂದ ತಪ್ಪಿಸಿಕೊಂಡ ನಾಯಿ’ಯಂತೆ ವರ್ತಿಸಿರುವುದನ್ನು ತಾನು ನೋಡಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

 ತನ್ನ ನೂತನ ಪುಸ್ತಕ ‘ಅನ್‌ಹಿಂಜ್ಡ್’ನಲ್ಲಿ ಅವರು ಇನ್ನೂ ಹಲವಾರು ವಿವಾದಾತ್ಮಕ ವಿಷಯಗಳನ್ನು ಹೇಳಿದ್ದಾರೆ. ಪುಸ್ತಕವು ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

ಅದೇ ವೇಳೆ, ಇದು ಸುಳ್ಳುಗಳು ಮತ್ತು ಸುಳ್ಳು ಆರೋಪಗಳನ್ನು ಹೊಂದಿದ ಪುಸ್ತಕವಾಗಿದೆ ಎಂಬುದಾಗಿ ಪುಸ್ತಕದ ಬಗ್ಗೆ ಶ್ವೇತಭವನ ಕಿಡಿಕಾರಿದೆ.

ಪುಸ್ತಕದ ಲೇಖಕಿಯು ಟ್ರಂಪ್‌ರ ‘ದ ಅಪ್ರೆಂಟಿಸ್’ ರಿಯಾಲಿಟಿ ಶೋನಲ್ಲಿ ಓರ್ವ ಸ್ಪರ್ಧಿಯಾಗಿದ್ದರು ಹಾಗೂ ಬಳಿಕ ಅವರು ಅಧ್ಯಕ್ಷರ ಹಿರಿಯ ಸಲಹಾಗಾರ್ತಿಯಾಗಿ ಸೇವೆ ಸಲ್ಲಿಸಿದ್ದರು.

  ಅವರು ತನ್ನ ಪುಸ್ತಕದಲ್ಲಿ ಅಧ್ಯಕ್ಷರನ್ನು ಏಕಾಗ್ರತೆಯಿಲ್ಲದ, ತನ್ನ ಬಗ್ಗೆಯೇ ಚಿಂತಿಸುವ, ಮಹಿಳೆಯರನ್ನು ದ್ವೇಷಿಸುವ ಹಾಗೂ ಅಭದ್ರತೆಯ ಭಾವನೆ ಹೊಂದಿರುವ ವ್ಯಕ್ತಿ ಎಂಬುದಾಗಿ ಚಿತ್ರಿಸಿದ್ದಾರೆ ಹಾಗೂ ಸರಣಿ ಆರೋಪಗಳನ್ನು ಹೊರಿಸಿದ್ದಾರೆ.

ಟ್ರಂಪ್ ಅಸಹಿಷ್ಣು

‘‘ಟ್ರಂಪ್‌ರನ್ನು ವರ್ಷಗಳಿಂದ ಸಮರ್ಥಿಸಿಕೊಂಡ ಬಳಿಕ, ಅವರೊಬ್ಬ ಅಸಹಿಷ್ಣು ಎಂಬ ನಿರ್ಧಾರಕ್ಕೆ ನಾನು ಬರಬೇಕಾಯಿತು’’ ಎಂದು ಅವರು ಹೇಳಿದ್ದಾರೆ.

‘‘ಆರಂಭದಲ್ಲಿ ಟ್ರಂಪ್ ಓರ್ವ ಅಸಹಿಷ್ಣು ಎಂಬುದಾಗಿ ಜನರು ಹೇಳಿದಾಗ ನಾನು ನಂಬಿರಲಿಲ್ಲ. ಅವರ ಬಗ್ಗೆ ಜನರು ಹೇಳುತ್ತಿರುವುದನ್ನು ನಾನು ತಿರಸ್ಕರಿಸಿದೆ. ಯಾಕೆಂದರೆ ಟ್ರಂಪ್ ಬಗ್ಗೆ ನನಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ ಎಂದು ನಾನು ಭಾವಿಸಿದೆ. ಆದರೆ, ಬಳಿಕ ಅವರ ಜನಾಂಗೀಯ ನಿಂದನೆಯ ಸ್ವಭಾವವನ್ನು ನನ್ನ ಕಣ್ಣಾರೆ ನೋಡುವ ಹಾಗೂ ನಿಂದನೆಯ ಮಾತುಗಳನ್ನು ಕಿವಿಯಾರೆ ಕೇಳುವ ಸಂದರ್ಭಗಳು ಬಂದವು. ಇಂಥ ಎಷ್ಟು ಘಟನೆಗಳಿಗೆ ನಾನು ಸಾಕ್ಷಿಯಾದೆ ಎಂದರೆ ಅವರೊಬ್ಬ ಅಸಹಿಷ್ಣು ಎನ್ನುವುದನ್ನು ನಾನಿನ್ನು ನಿರಾಕರಿಸಲಾರೆ’’ ಎಂದು ಲೇಖಕಿ ನ್ಯೂಮನ್ ಹೇಳಿದ್ದಾರೆ.

ಮಾತನಾಡದಂತೆ ತಡೆಯಲು ಯತ್ನಿಸಿದ್ದರು

ಡೊನಾಲ್ಡ್ ಟ್ರಂಪ್ ಜನಾಂಗೀಯ ನಿಂದನೆಯ ಮಾತುಗಳನ್ನು ಆಡುತ್ತಾರೆ ಎನ್ನುವುದನ್ನು ಯಾರಿಗೂ ಹೇಳಬಾರದು ಎಂಬ ನಿಟ್ಟಿನಲ್ಲಿ ಅಧ್ಯಕ್ಷರ ಜನರು ತನಗೆ ಆಮಿಷ ಒಡ್ಡಿದ್ದರು ಎಂಬುದಾಗಿ ಲೇಖಕಿ ಒಮರೊಸಾ ಮ್ಯಾನಿಗಾಲ್ಟ್ ನ್ಯೂಮನ್ ಆರೋಪಿಸಿದ್ದಾರೆ.

ಶ್ವೇತಭವನದಿಂದ ತಾನು ಹೊರ ಬರುವಾಗ, ಟ್ರಂಪ್‌ರ 2020ರ ಚುನಾವಣಾ ಪ್ರಚಾರ ತಂಡದಲ್ಲಿ ‘ಹಿರಿಯ ಹುದ್ದೆ’ಯೊಂದನ್ನು ನೀಡಿ ತಿಂಗಳಿಗೆ 15,000 ಡಾಲರ್ (ಸುಮಾರು 10.36 ಲಕ್ಷ ರೂಪಾಯಿ) ವೇತನ ನೀಡುವ ಪ್ರಸ್ತಾಪವನ್ನು ಮುಂದಿಡಲಾಯಿತು ಎಂದು ಅವರು ಹೇಳಿದ್ದಾರೆ.

ಆದರೆ, ಅದರ ಜೊತೆಗೆ ಮಾಹಿತಿ ಬಹಿರಂಗಪಡಿಸದಿರುವ ಕಠಿಣ ಒಪ್ಪಂದವೊಂದಕ್ಕೆ ತಾನು ಸಹಿಹಾಕಬೇಕಾಗಿತ್ತು ಹಾಗೂ ಅದು ತಾನು ಟೆಲಿವಿಶನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನೋಡಿದ್ದ ಒಪ್ಪಂದದಷ್ಟೇ ಕಠಿಣ ಹಾಗೂ ನಿರ್ಬಂಧಕಾರಿಯಾಗಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News