ಮುಸ್ಲಿಮ್ ಉಯಿಘರ್ ಸಮುದಾಯಕ್ಕೆ ‘ಹಕ್ಕುರಹಿತ’ ವಲಯವಾದ ಚೀನಾ ರಾಜ್ಯ: ವಿಶ್ವಸಂಸ್ಥೆಯಲ್ಲಿ ಕಳವಳ

Update: 2018-08-11 17:05 GMT

ವಿಶ್ವಸಂಸ್ಥೆ, ಆ. 11: ಚೀನಾ ತನ್ನ ವಾಯುವ್ಯ ಪ್ರಾಂತ ಕ್ಸಿನ್‌ಜಿಯಾಂಗ್‌ನ್ನು ಮುಸ್ಲಿಮ್ ಉಯಿಘರ್ ಸಮುದಾಯಕ್ಕೆ ‘ಹಕ್ಕುರಹಿತ ವಲಯ’ ಹಾಗೂ ‘ಬೃಹತ್ ಬಂಧನ ಶಿಬಿರ’ವನ್ನಾಗಿ ಪರಿವರ್ತಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ನಡೆದ ಮಾನವಹಕ್ಕುಗಳ ಸಭೆಯೊಂದಕ್ಕೆ ತಿಳಿಸಲಾಗಿದೆ.

ಉಯಿಘರ್ ಮುಸ್ಲಿಮರನ್ನು ಚೀನಾ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಜನಾಂಗೀಯ ತಾರತಮ್ಯ ನಿರ್ಮೂಲನೆ ಸಮಿತಿಯ ಉಪಾಧ್ಯಕ್ಷೆ ಗೇ ಮೆಕ್‌ಡೋಗಲ್ ಪ್ರಸ್ತಾಪಿಸಿದರು.

 ಧಾರ್ಮಿಕ ಉಗ್ರವಾದದ ವಿರುದ್ಧ ಹೋರಾಡುವ ಹೆಸರಿನಲ್ಲಿ ಉಯಿಘರ್ ಮುಸ್ಲಿಮರನ್ನು ಮರುಶಿಕ್ಷಣ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬುದಾಗಿ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯದಿಂದ ಬರುತ್ತಿರುವ ವರದಿಗಳ ಬಗ್ಗೆ ತಾನು ಕಳವಳಗೊಂಡಿದ್ದೇನೆ ಎಂದು ಅವರು ಹೇಳಿದರು.

 ಈ ಆರೋಪಗಳಿಗೆ ಚೀನಾ ಇನ್ನಷ್ಟೇ ಅಧಿಕೃತವಾಗಿ ಪ್ರತಿಕ್ರಿಯಿಸಬೇಕಾಗಿದೆ. ಈ ಆರೋಪಗಳಿಗೆ ತಾನು ಸೋಮವಾರ ಪ್ರತಿಕ್ರಿಯಿಸುವುದಾಗಿ ಸಮಿತಿಯಲ್ಲಿ ಚೀನಾದ ಪ್ರತಿನಿಧಿಯಾಗಿರುವ ಯು ಜಿಯಾನ್‌ಹುವ ಹೇಳಿದರು.

ಚೀನಾದ ಅತಿ ದೊಡ್ಡ ಪ್ರಾಂತವಾಗಿರುವ ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಘರ್ ಮುಸ್ಲಿಮರು ಒಟ್ಟು ಜನಸಂಖ್ಯೆಯ 45 ಶೇಕಡದಷ್ಟು ಇದ್ದಾರೆ. ಇದನ್ನು ಟಿಬೆಟ್‌ನಂತೆ ಸ್ವಾಯತ್ತ ವಲಯವನ್ನಾಗಿ ಘೋಷಿಸಲಾಗಿದೆ.

ಮರುಶಿಕ್ಷಣ ಶಿಬಿರಗಳಿಗೆ ಲಕ್ಷಾಂತರ ಉಯಿಘರ್‌ಗಳು!

ಕಳೆದ ಹಲವಾರು ತಿಂಗಳುಗಳಲ್ಲಿ ಲಕ್ಷಾಂತರ ಉಯಿಘರ್ ಮುಸ್ಲಿಮರನ್ನು ‘ಮರು-ಶಿಕ್ಷಣ’ ನೀಡುವ ಶಿಬಿರಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂಬುದಾಗಿ ಈ ವಲಯ ಮತ್ತು ವಿದೇಶಗಳಿಂದ ಬಂದಿರುವ ವರದಿಗಳು ಹೇಳುತ್ತಿವೆ.

‘‘ಧಾರ್ಮಿಕ ಉಗ್ರವಾದವನ್ನು ಹತ್ತಿಕ್ಕುವ ಹಾಗೂ ಸಾಮಾಜಿಕ ಸ್ಥಿರತೆಯನ್ನು ಕಾಪಾಡುವ ಹೆಸರಿನಲ್ಲಿ, ಚೀನಾ ಉಯಿಘರ್ ಸ್ವಾಯತ್ತ ವಲಯವನ್ನು ಬದಲಾಯಿಸಿದೆ ಹಾಗೂ ಅದನ್ನು ಬೃಹತ್ ಬಂಧನ ಶಿಬಿರವನ್ನಾಗಿ ಮಾಡಲಾಗಿದೆ. ಇಲ್ಲಿ ಭಾರೀ ಪ್ರಮಾಣದಲ್ಲಿ ನಿಗೂಢತೆ ನೆಲೆಸಿದ್ದು, ಒಂದು ರೀತಿಯ ‘ಹಕ್ಕುರಹಿತ ವಲಯ’ವಾಗಿದೆ ಎಂದು ಗೇ ಮೆಕ್‌ಡೋಗಲ್ ಹೇಳಿದರು.

ಧರ್ಮ ಕಾನೂನಿಗಿಂತ ಮೇಲಲ್ಲ: ಚೀನಾ

 ವಾಯುವ್ಯ ಚೀನಾದಲ್ಲಿರುವ ಬೃಹತ್ ಮಸೀದಿಯೊಂದನ್ನು ಧ್ವಂಸಗೊಳಿಸುವ ಸರಕಾರದ ನಿರ್ಧಾರವನ್ನು ಪ್ರತಿಭಟಿಸುತ್ತಿರುವವರೊಂದಿಗೆ ದೃಢವಾಗಿ ವರ್ತಿಸುವಂತೆ ಚೀನಾದ ಕಮ್ಯುನಿಸ್ಟ್ ಪಕ್ಷವು ಅಧಿಕಾರಿಗಳನ್ನು ಒತ್ತಾಯಿಸಿದೆ.

ಚೀನಾದಲ್ಲಿ ಯಾವುದೇ ಧರ್ಮವು ಕಾನೂನಿಗಿಂತ ಮೇಲಲ್ಲ ಎಂಬ ಪಕ್ಷದ ನಿಲುವನ್ನು ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಶನಿವಾರ ಸ್ಪಷ್ಟಪಡಿಸಿದೆ.

ಮಸೀದಿ ಧ್ವಂಸ ವಿರೋಧಿಸಿ ಸಾವಿರಾರು ಮಂದಿಯಿಂದ ಪ್ರತಿಭಟನೆ

ವಾಯುವ್ಯ ಚೀನಾದ ವೀಝೂ ಎಂಬಲ್ಲಿರುವ ಮಸೀದಿಯನ್ನು ಧ್ವಂಸಗೊಳಿಸಲು ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಪ್ರತಿಭಟಿಸಲು ಅಲ್ಪಸಂಖ್ಯಾತ ಹುಯಿ ಮುಸ್ಲಿಮ್ ಸಮುದಾಯದ ಸಾವಿರಾರು ಸದಸ್ಯರು ಮಸೀದಿಯೆದುರು ಜಮಾಯಿಸಿದ್ದಾರೆ.

ಮಸೀದಿಯನ್ನು ಧ್ವಂಸಗೊಳಿಸುವ ಬದಲು, ಚೀನಾದ ಸಾಂಪ್ರದಾಯಿಕ ಕಟ್ಟಡದಂತೆ ಕಾಣುವ ರೀತಿಯಲ್ಲಿ ಅದರ ವಿನ್ಯಾಸವನ್ನು ಬದಲಾಯಿಸುವ ಪ್ರಸ್ತಾಪವನ್ನು ಸರಕಾರ ನೀಡಿತ್ತು ಎಂದು ಪ್ರತಿಭಟನಕಾರರು ಕೆಲವು ಸುದ್ದಿಗಾರರಿಗೆ ಹೇಳಿದರು. ಆದರೆ, ಮುಸ್ಲಿಮ್ ಸಮುದಾಯ ಈ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ಅವರು ತಿಳಿಸಿದರು.

ಈ ಮಸೀದಿಯು ಹೊಸದಾಗಿದ್ದು ಕಳೆದ ವರ್ಷವಷ್ಟೇ ಅದರ ನಿರ್ಮಾಣ ಕಾರ್ಯ ಮುಗಿದಿದೆ.

ಆದರೆ, ಈ ಮಸೀದಿಗೆ ಸೂಕ್ತ ಪರವಾನಿಗೆಗಳನ್ನು ಪಡೆದುಕೊಳ್ಳಲಾಗಿಲ್ಲ, ಹಾಗಾಗಿ ಅದನ್ನು ಧ್ವಂಸಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ, ಧ್ವಂಸಗೊಳಿಸುವ ಸರಕಾರದ ಪ್ರಸ್ತಾಪವನ್ನು ಇಲ್ಲಿನ ಮುಸ್ಲಿಮರು ತೀವ್ರವಾಗಿ ವಿರೋಧಿಸುತ್ತಾರೆ. ಮಸೀದಿಯ ನಿರ್ಮಾಣ ಹಂತದಲ್ಲಿ ಪರವಾನಿಗೆಗಳ ಬಗ್ಗೆ ಸರಕಾರ ಆಕ್ಷೇಪಗಳನ್ನು ಎತ್ತಿಲ್ಲ ಎಂದು ಅವರು ಆಕ್ಷೇಪಿಸುತ್ತಾರೆ.

ಈ ಮಾದರಿಯ ಸಾರ್ವಜನಿಕ ಪ್ರತಿಭಟನೆಗಳು ಚೀನಾದಲ್ಲಿ ಅಪರೂಪ. ಯಾವುದೇ ರೀತಿಯ ಭಿನ್ನಮತದ ಸೂಚನೆ ಲಭಿಸಿದರೆ ಸರಕಾರ ತಕ್ಷಣ ಅದನ್ನು ದಮನಿಸುತ್ತದೆ.

ಜನರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಮಸೀದಿಯ ಧ್ವಂಸ ಕಾರ್ಯವನ್ನು ಅಧಿಕಾರಿಗಳು ವಿಳಂಬಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News