×
Ad

ಸನಾತನ ಸಂಸ್ಥೆಯ ಮೇಲಾಗುತ್ತಿರುವ ಮಿಥ್ಯಾರೋಪವನ್ನು ಸಂಘಟಿತರಾಗಿ ಎದುರಿಸೋಣ: ಶ್ರೀಕೃಷ್ಣ ಉಪಾಧ್ಯಾಯ

Update: 2018-08-11 22:34 IST

ಮಂಗಳೂರು, ಆ.11: ಸನಾತನ ಸಂಸ್ಥೆಯ ಮೇಲಾಗುತ್ತಿರುವ ಮಿಥ್ಯಾರೋಪವನ್ನು ಸಂಘಟಿತರಾಗಿ ಎದುರಿಸಬೇಕು. ಎಲ್ಲರೂ ಜಾಗೃತಿಗೊಳ್ಳಬೇಕು ಎಂದು ವಾಗ್ಮಿ, ಟೀಂ ಸ್ವಚ್ಛ ಪುತ್ತೂರಿನ ಸಂಯೋಜಕ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದ್ದಾರೆ.

ನಗರದ ಬಾಲಂಭಟ್ ಹಾಲ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಜನಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಹಿಂದುತ್ವವಾದಿಗಳನ್ನು ಹಾಗೂ ಹಿಂದೂ ಸಂಘಟನೆಗಳನ್ನು ಸಿಲುಕಿಸುವ ಸರಕಾರ, ತನಿಖಾ ಸಂಸ್ಥೆಗಳು ಹಾಗೂ ವಿಚಾರವಾದಿಗಳ ಷಡ್ಯಂತ್ರ ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿ ಖಂಡಿಸುತ್ತದೆ. ಈ ಅಪವಾದವನ್ನು ಸ್ಥಾಪಿತ ಹಿತಾಸಕ್ತಿಗಳು ಹುಟ್ಟುಹಾಕುತ್ತಿದ್ದು, ದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಇದು ಸಫಲವಾಗಲಾರದು ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗೇರ ಮಾತನಾಡಿ, ಗೌರಿ ಹತ್ಯೆಯ ಕೆಲವೇ ನಿಮಿಷಗಳಲ್ಲಿ ರಾಹುಲ್‌ಗಾಂಧಿ ಟ್ವಿಟ್ಟರ್‌ನಲ್ಲಿ ಆರೆಸ್ಸೆಸ್‌ನ ಕೈವಾಡವಿದೆ ಎಂದು ಹೇಳಿದ್ದರು. ಎಸ್‌ಐಟಿಯು 9 ತಿಂಗಳ ತನಿಖೆಯ ನಂತರವೂ ಈ ನಿಟ್ಟಿನಲ್ಲಿಯೇ ತನಿಖೆಯನ್ನು ಮುಂದುವರಿಸಿದೆ. ಹಾಗಿದ್ದರೆ ರಾಹುಲ್‌ಗಾಂಧಿ ಅವರಿಗೆ ಈ ಹತ್ಯೆಯ ಬಗ್ಗೆ ಮೊದಲೇ ತಿಳಿದಿತ್ತೇ ಎಂದು ಪ್ರಶ್ನಿಸಿದರು.

ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿತ ಬಂಧಿತರ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯವು ಹೇಳಿದ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ. ತನಿಖೆಯ ಕಾರ್ಯಪದ್ಧತಿಯನ್ನು ಪಾಲಿಸಿಲ್ಲ. ಬಂಧಿತರಿಗೆ ತಮ್ಮ ನ್ಯಾಯವಾದಿಗಳನ್ನು ಆಯ್ದುಕೊಳ್ಳಲು ಎಸ್‌ಐಟಿ ಅವಕಾಶವನ್ನು ಮಾಡಿಕೊಡದೇ ತಾವೇ ನ್ಯಾಯವಾದಿಗಳನ್ನು ನೇಮಿಸಿದೆ ಎಂದು ದೂರಿದರು.

ಎಸ್‌ಐಟಿಯು ಅತ್ಯಂತ ಅಮಾನುಷವಾಗಿ ಚಿತ್ರಹಿಂಸೆ ನೀಡಿ ಬಂಧಿತರಿಂದ ತಮಗೆ ಬೇಕಾದಂತೆ ಹೇಳಿಕೆಗಳನ್ನು ಪಡೆದುಕೊಂಡಿದೆ. ಇಂದು ಗೌರಿಯ ಹತ್ಯೆಗಾಗಿ ಎಸ್‌ಐಟಿ ಯ ರಚನೆ ಮಾಡಿರುವ ಸರಕಾರವು 27 ಹಿಂದುತ್ವವಾದಿಗಳ ಕೊಲೆಯ ಬಗ್ಗೆ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ದೀಪಪ್ರಜ್ವಲನೆ ಹಾಗೂ ಶಂಖನಾದದ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.

ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆಯ ಆನಂದ ಶೆಟ್ಟಿ ಅಡ್ಯಾರ್, ಜೀವನ್ ನೀರ್ ಮಾರ್ಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಲಕ್ಷ್ಮಣ್ ಪವಾರ್, ನ್ಯಾಯವಾದ ಶಿವರಾಮ ಮಣಿಯಾಣಿ, ವಾಸ್ತುತಜ್ಞ ದಯಾನಂದ ವಳಚ್ಚಿಲ್, ಹಿಂದೂ ಜನಜಾಗೃತಿ ಸಮಿತಿಯ ಪ್ರಭಾಕರ ನಾಯ್ಕಿ, ವಿಜಯಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News