ಲಂಡನ್: ಖಾಲಿಸ್ತಾನ ಪರ ಸಭೆಗೆ ಪ್ರತಿಯಾಗಿ ಸ್ವಾತಂತ್ರ್ಯ ದಿನಾಚರಣೆ

Update: 2018-08-11 17:18 GMT

ಲಂಡನ್, ಆ. 11: ಲಂಡನ್‌ನ ಟ್ರಾಫಲ್ಗರ್ ಚೌಕದಲ್ಲಿ ನಾಳೆ ನಡೆಯಲಿರುವ ಖಾಲಿಸ್ತಾನ ಪರ ಸಭೆಗೆ ಪ್ರತಿಯಾಗಿ ಬ್ರಿಟನ್‌ನಲ್ಲಿ ಭಾರತೀಯ ಸ್ವಾತಂತ್ರ್ಯ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.

ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಖಾಲಿಸ್ತಾನ ಪರ ಸಭೆ ‘ಲಂಡನ್ ಡಿಕ್ಲರೇಶನ್ ಫಾರ್ ಅ ರೆಫರೆಂಡಮ್ 2020’ ಹಿಂದಿನ ಸಂಘಟನೆ ಹರಡುತ್ತಿದೆ ಎಂಬುದಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಂಘಟಕ ‘ವೀ ಸ್ಟಾಂಡ್ ವಿದ್ ಇಂಡಿಯಾ’ ಆರೋಪಿಸಿದೆ.

‘‘ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ರದ್ದಾಗಿದೆ ಎಂಬ ಸುಳ್ಳು ಸುದ್ದಿಯನ್ನು ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಯಾಕೆ ಹರಡುತ್ತಿದೆ?’’ ಎಂದು ಸಂಘಟಕ ನವದೀಪ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.

ಟ್ರಾಫಲ್ಗರ್ ಚೌಕದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.

ಶಾಂತಿಯುತವಾಗಿ ಪ್ರತಿಭಟಿಸುವ ಯಾವುದೇ ಗುಂಪನ್ನು ನಿಷೇಧಿಸುವುದಿಲ್ಲ ಎಂಬುದಾಗಿ ಬ್ರಿಟನ್ ಇತ್ತೀಚೆಗೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News