ಮಾಜಿ ಲೋಕಸಭಾ ಸ್ಪೀಕರ್ ಚಟರ್ಜಿ ಸ್ಥಿತಿ ಚಿಂತಾಜನಕ

Update: 2018-08-12 13:28 GMT

ಕೋಲ್ಕತಾ,ಆ.12: ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ (89) ಅವರು ರವಿವಾರ ಹೃದಯಾಘಾತಕ್ಕೊಳಗಾಗಿದ್ದು,ಅವರ ದೇಹಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಮೂತ್ರಪಿಂಡ ಕಾಯಿಲೆಯಿಂದ ನರಳುತ್ತಿರುವ ಚಟರ್ಜಿ ಅವರನ್ನು ಮಂಗಳವಾರ ಚಿಂತಾಜನಕ ಸ್ಥಿತಿಯಲ್ಲಿ ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಟರ್ಜಿ ಅವರಿಗೆ ಡಯಾಲಿಸಿಸ್ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಕೆಲವೊಮ್ಮೆ ಹೃದಯವು ಸಹಕರಿಸುವುದಿಲ್ಲ. ಅವರಿಗೆ ಬೆಳಿಗ್ಗೆ ಲಘು ಹೃದಯಾಘಾತವಾಗಿತ್ತು,ಆದರೆ ಅವರು ಚೇತರಿಸಿಕೊಂಡಿದ್ದಾರೆ. ತೀವ್ರ ನಿಗಾ ಘಟಕದಲ್ಲಿರಿಸಲಾಗಿದ್ದು, ಜೀವರಕ್ಷಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಕಳೆದ ತಿಂಗಳು ಚಟರ್ಜಿಯವರು ಪಾರ್ಶ್ವವಾಯುವಿಗೆ ಗುರಿಯಾಗಿದ್ದರು.

ಅವರು ಕಳೆದ 40 ದಿನಗಳಿಂದಲೂ ಚಿಕಿತ್ಸೆಯಲ್ಲಿದ್ದಾರೆ. ಮಧ್ಯೆ ಆರೋಗ್ಯದಲ್ಲಿ ಸುಧಾರಣೆಯಾಗಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು, ಆದರೆ ಮೂರು ದಿನಗಳ ಬಳಿಕ ಕಳೆದ ಮಂಗಳವಾರ ಅವರ ಸ್ಥಿತಿ ವಿಷಮಿಸಿದ್ದು,ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದರು.

10 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಚಟರ್ಜಿ1968ರಲ್ಲಿ ಸಿಪಿಎಂ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅವರು ಪಕ್ಷದ ಕೇಂದ್ರೀಯ ಸಮಿತಿಯ ಸದಸ್ಯರೂ ಆಗಿದ್ದರು.

2004ರಿಂದ 2009ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು. ಆದರೆ 2008ರಲ್ಲಿ ಆಗಿನ ಯುಪಿಎ ಸರಕಾರಕ್ಕೆ ಸಿಪಿಎಂ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಾಗ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News