×
Ad

ಸಿಯಾಚಿನ್ ಗ್ಲೇಸಿಯರ್‌ನಲ್ಲಿಯ ಯೋಧರಿಗೆ ವಿಶೇಷ ಉಡುಪು,ಉಪಕರಣ ತಯಾರಿಕೆಗೆ ಕೊನೆಗೂ ಸೇನೆ ಸಜ್ಜು

Update: 2018-08-12 19:03 IST

ಹೊಸದಿಲ್ಲಿ,ಆ.12: ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧಕ್ಷೇತ್ರವಾಗಿರುವ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿಯೋಜಿತ ಯೋಧರಿಗಾಗಿ ವಿಶೇಷ ಉಡುಪುಗಳು, ಮಲಗುವ ಕಿಟ್ ಮತ್ತು ಪ್ರಮುಖ ಉಪಕರಣಗಳನ್ನು ತಯಾರಿಸುವ ದೀರ್ಘಕಾಲದಿಂದ ಬಾಕಿಯುಳಿದಿರುವ ಯೋಜನೆಗೆ ಸೇನೆಯು ಅಂತಿಮ ರೂಪವನ್ನು ನೀಡುತ್ತಿದೆ.

ಸಮುದ್ರ ಮಟ್ಟದಿಂದ 16,000 ಅಡಿಗಳಿಂದ 20,000 ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶವನ್ನು ಕಾಯುತ್ತಿರುವ ಯೋಧರಿಗಾಗಿ ಅಲ್ಲಿಯ ವಿಪರೀತ ಚಳಿಯ ವಾತಾವರಣವನ್ನು ಸಹಿಸಿಕೊಳ್ಳಲು ವಿಶೇಷ ಉಡುಪುಗಳು ಮತ್ತು ಪರ್ವತಾರೋಹಣ ಕಿಟ್‌ಗಳನ್ನು ಅಮೆರಿಕ, ಆಸ್ಟ್ರೇಲಿಯಾ,ಕೆನಡಾ ಮತ್ತು ಸ್ವಿಟ್ಝರ್‌ಲ್ಯಾಂಡ್‌ಗಳಂತಹ ದೇಶಗಳಿಂದ ಆಮದು ಮಾಡಿಕೊಳ್ಳಲು ಭಾರತವು ವಾರ್ಷಿಕ ಸುಮಾರು 800 ಕೋ.ರೂ.ಗಳನ್ನು ವೆಚ್ಚ ಮಾಡುತ್ತಿದೆ. ದೇಶಿಯವಾಗಿ ಇವುಗಳನ್ನು ಉತ್ಪಾದಿಸುವ ಮೂಲಕ ವಾರ್ಷಿಕ ಸುಮಾರು 300 ಕೋ.ರೂ.ಗಳನ್ನು ಉಳಿಸಲು ಸೇನೆಯು ಉದ್ದೇಶಿಸಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿದವು.

ಭಾರತದಲ್ಲಿ ತಯಾರಿಸಲಾಗುವ ಕೆಲವು ವಿಶೇಷ ಉಡುಪುಗಳನ್ನು ಡೋಕಾ ಲಾದಂತಹ ಎತ್ತರದ ಪ್ರದೇಶಗಳಲ್ಲಿ ಮತ್ತು ದುರ್ಗಮ ಭಾರತ-ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೂ ಪೂರೈಸಲಾಗುವುದು ಎಂದು ಅವು ಹೇಳಿದವು.

ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ ಗ್ಲೇಸಿಯರ್ ವಿಶ್ವದ ಅತ್ಯಂತ ಎತ್ತರದ ಸೇನಾ ವಲಯವಾಗಿದ್ದು,ಇಲ್ಲಿ ಯೋಧರು ಹಿಮಕಡಿತಗಳು ಮತ್ತು ತೀವ್ರ ಗಾಳಿಯ ಅಪಾಯಗಳಿಂದಲೂ ತಮ್ಮನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಚಳಿಗಾಲದಲ್ಲಿ ಹಿಮಪಾತಗಳು ಮತ್ತು ಭೂಕುಸಿತಗಳು ಇಲ್ಲಿ ಸಾಮಾನ್ಯವಾಗಿದ್ದು,ತಾಪಮಾನವು ಮೈನಸ್ 60 ಡಿಗ್ರಿ ಸೆಲ್ಸಿಯಸ್‌ವರೆಗೂ ಕುಸಿಯುತ್ತದೆ. ಅಧಿಕೃತ ಅಂಕಿಅಂಶಗಳಂತೆ ಕಳೆದ 10 ವರ್ಷಗಳಲ್ಲಿ 163 ಯೋಧರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ 1984ರಿಂದ ಈ ವ್ಯೆಹಾತ್ಮಕ ಪ್ರದೇಶದಲ್ಲಿ ತಮ್ಮ ಯೋಧರನ್ನು ನಿಯೋಜಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News