ಪ್ರವಾಹ ಪೀಡಿತ ಕೇರಳಕ್ಕೆ 100 ಕೋಟಿ ರೂ. ಘೋಷಿಸಿದ ರಾಜನಾಥ್ ಸಿಂಗ್
ತಿರುವನಂತಪುರಂ, ಆ.12: ಪ್ರವಾಹ ಪೀಡಿತ ಕೇರಳವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದಿರುವ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ರಾಜ್ಯಕ್ಕೆ 100 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ.
ಕಳೆದ ಐದು ದಿನಗಳಲ್ಲಿ ಕೇರಳದಲ್ಲಿ 37 ಮಂದಿ ಮೃತಪಟ್ಟಿದ್ದಾರೆ. 14ರಲ್ಲಿ 8 ಜಿಲ್ಲೆಗಳಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ. ಪರಿಹಾರ ಘೋಷಣೆಗೂ ಮುನ್ನ ರಾಜ್ ನಾಥ್ ಸಿಂಗ್ ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು.
ಕಳೆದ ಐದು ದಿನಗಳಿಂದ ಕೇರಳವನ್ನು ಕಂಗೆಡಿಸಿದ ಧಾರಾಕಾರ ಮಳೆ ರವಿವಾರ ಬೆಳಿಗ್ಗೆ ಸ್ವಲ್ಪ ಕಡಿಮೆಯಾಗಿದ್ದರೂ ಮಧ್ಯಾಹ್ನದ ಬಳಿಕ ಮತ್ತೆ ಬಿರುಸಾಗಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎರ್ನಾಕುಳಂಗೆ ಆಗಮಿಸಿ ನೆರೆಹಾವಳಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಇಡುಕ್ಕಿ ಹಾಗೂ ಎರ್ನಾಕುಳಂನಲ್ಲಿ ಸಮೀಕ್ಷೆ ನಡೆಸಿದ ಸಿಂಗ್, ಕೇರಳದಲ್ಲಿ ನೆರೆಹಾವಳಿ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು ಕೇಂದ್ರ ಸರಕಾರ ರಾಜ್ಯಕ್ಕೆ ಎಲ್ಲಾ ರೀತಿಯ ನೆರವನ್ನು ಒದಗಿಸುತ್ತದೆ ಎಂದು ಭರವಸೆ ನೀಡಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ಸಚಿವ ಕೆ.ಜೆ. ಅಲ್ಫೋನ್ಸ್ , ಕೇರಳದ ಕಂದಾಯ ಸಚಿವ ಇ.ಚಂದ್ರಶೇಖರನ್ ಜತೆಗಿದ್ದರು. ಈ ಮಧ್ಯೆ ಮುಂದಿನ ನಾಲ್ಕು ದಿನ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 8ರಿಂದ ರಾಜ್ಯವನ್ನು ಕಂಗೆಡಿಸಿರುವ ಮಳೆಯಿಂದ ಇದುವರೆಗೆ 37 ಜನ ಪ್ರಾಣ ಕಳೆದುಕೊಂಡಿದ್ದಾರೆ.
14 ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ರಕ್ಷಣಾ ಶಿಬಿರಗಳಲ್ಲಿ 60 ಸಾವಿರಕ್ಕೂ ಹೆಚ್ಚಿನ ಜನರು ಆಶ್ರಯ ಪಡೆದಿದ್ದಾರೆ. ಸೇನೆಯ 10 ತುಕಡಿಗಳು, ಮದ್ರಾಸ್ ರೆಜಿಮೆಂಟ್‌ನ ಒಂದು ಘಟಕ, ವಾಯುಪಡೆ, ಭೂಸೇನೆ ಹಾಗೂ ನೌಕಾಸೇನೆಯ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 14 ಘಟಕಗಳನ್ನು ಅತ್ಯಂತ ಹೆಚ್ಚು ತೊಂದರೆಗೊಳಗಾಗಿರುವ ತ್ರಿಶೂರ್, ಎರ್ನಾಕುಳಂ, ಅಳಪುಝ, ವಯನಾಡ್, ಕೋಝಿಕೋಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ರವಿವಾರ ಪ್ರಮುಖ ಜಲಾಶಯಗಳ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ಆದರೂ ಈಗಾಗಲೇ ಜಾರಿಗೊಳಿಸಿರುವ ಎಚ್ಚರಿಕೆ ಸಂದೇಶವನ್ನು ಉಳಿಸಿಕೊಳ್ಳಲಾಗಿದೆ ಎಂದು ಸರಕಾರದ ಅಧಿಖಾರಿ ಪಿ.ಎಚ್.ಕುರಿಯನ್ ಹೇಳಿದ್ದಾರೆ. ತಗ್ಗುಪ್ರದೇಶಗಳ ಜನತೆಗೆ ನೆರೆಹಾವಳಿಯ ಎಚ್ಚರಿಕೆ ನೀಡಲಾಗಿದ್ದು ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ . ವಯನಾಡ್‌ನಲ್ಲಿ ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.