ಬಿಹಾರ ಆಶ್ರಮದಲ್ಲಿ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಬಳಿ ಸಚಿವರು ಸೇರಿ 40 ಜನರ ಫೋನ್ ನಂಬರ್
ಪಾಟ್ನ, ಆ.12: ಮುಝಫರ್‌ಪುರದ ಆಶ್ರಮದಲ್ಲಿ ಬೆಳಕಿಗೆ ಬಂದಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ , ಈಗ ಜೈಲಿನಲ್ಲಿರುವ ಬೃಜೇಶ್ ಠಾಕೂರ್ ಬಳಿ ಓರ್ವ ಸಚಿವರೂ ಸೇರಿದಂತೆ 40 ಜನರ ಫೋನ್ ನಂಬರ್‌ಗಳು ಪತ್ತೆಯಾಗಿವೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಜೈಲುಗಳ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಮುಝಫರ್‌ಪುರ ಸೆಂಟ್ರಲ್ ಜೈಲಿನಲ್ಲಿರುವ ಠಾಕೂರ್ ಬಳಿ ಫೋನ್ ನಂಬರ್‌ಗಳಿದ್ದ ಎರಡು ಹಾಳೆಗಳು ದೊರಕಿದ್ದು ಇದರಲ್ಲಿ 40 ಮಂದಿಯ ಫೋನ್ ನಂಬರ್‌ಗಳಿವೆ. ಓರ್ವ ಸಚಿವರೂ ಸೇರಿದಂತೆ ಹಲವು ಪ್ರಭಾವೀ ವ್ಯಕ್ತಿಯ ನಂಬರ್‌ಗಳು ಇದರಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ಸರಕಾರದಿಂದ ಅನುದಾನ ಪಡೆಯುತ್ತಿರುವ ಆಶ್ರಮದಲ್ಲಿದ್ದ 30 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು ಬಿಹಾರ ಸರಕಾರ ಈ ಆಶ್ರಮದ ನೋಂದಣಿಯನ್ನು ರದ್ದುಪಡಿಸಿದೆ.
ಈ ಮಧ್ಯೆ, ಅತ್ಯಾಚಾರ ಪ್ರಕರಣದ ಮತ್ತೊಬ್ಬ ಆರೋಪಿ, ಬೃಜೇಶ್ ಠಾಕೂರ್‌ನ ಪುತ್ರ ರಾಹುಲ್ ಆನಂದ್‌ನನ್ನು ಶನಿವಾರ ಸಿಬಿಐ ತಂಡ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಶನಿವಾರ ಬೆಳಿಗ್ಗೆ 9ರ ವೇಳೆ ಆಶ್ರಮದ ಸೀಲ್ ಒಡೆದು ಒಳಗೆ ಪ್ರವೇಶಿಸಿದ್ದ ಸಿಬಿಐ ತಂಡ ಅಲ್ಲಿ ಸುಮಾರು 11 ಗಂಟೆ ಶೋಧ ಕಾರ್ಯಾಚರಣೆ ನಡೆಸಿದ್ದು ಹಲವು ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದೆ. ಈ ಪ್ರಕಣದಲ್ಲಿ ಠಾಕೂರ್ ಸೇರಿದಂತೆ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.