ಆಶ್ರಮದಲ್ಲಿದ್ದ ಇಬ್ಬರು ಮಹಿಳೆಯರ ಸಾವು: ಪ್ರಕರಣ ಮುಚ್ಚಿಡಲು ಯತ್ನಿಸಿದ ಅಧಿಕಾರಿಗಳು
ಪಾಟ್ನಾ, ಆ.12: ಬಿಹಾರದಲ್ಲಿರುವ ಮಾನಸಿಕ ಅಸ್ವಸ್ಥ ಮಹಿಳೆಯರ ಆಶ್ರಮದಲ್ಲಿ ಮೃತಪಟ್ಟಿರುವ ಇಬ್ಬರು ಮಹಿಳೆಯರ ಮರಣೋತ್ತರ ಪರೀಕ್ಷೆಯನ್ನು ಪಾಟ್ನದ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಗಿದೆ. ಆದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಈ ಆಶ್ರಮದ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ. ಆಶ್ರಮದಲ್ಲಿದ್ದ 40ರ ಹರೆಯದ ಮಹಿಳೆ ಹಾಗೂ 16ರ ಹರೆಯದ ಯುವತಿಯನ್ನು ಶುಕ್ರವಾರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅವರು ಆಸ್ಪತ್ರೆಗೆ ದಾಖಲಿಸುವಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ರವಿವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪಾಟ್ನದ ಡಿವೈಎಸ್ಪಿ ಮನೋಜ್ ಕುಮಾರ್ ಸುಧಾಂಶು ತಿಳಿಸಿದ್ದಾರೆ. ಮಹಿಳೆಯರು ಭೇದಿಯಿಂದ ಮೃತಪಟ್ಟಿರುವುದಾಗಿ ಆಶ್ರಮದ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆಶ್ರಮದ ನಿವಾಸಿಗಳಿಗೆ ಪರಾರಿಯಾಗಲು ನೆರವಾಗುತ್ತಿದ್ದ ಆರೋಪದಲ್ಲಿ ಪೊಲೀಸರು ಆಶ್ರಮದ ಸಿಬ್ಬಂದಿಯೊಬ್ಬನನ್ನು ಬಂಧಿಸಿದ್ದಾರೆ. ಶುಕ್ರವಾರ ಈ ಆಶ್ರಮಕ್ಕೆ ಭೇಟಿ ನೀಡಿದ್ದ ಪೊಲೀಸರು ಅಲ್ಲಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದರು. ಅಲ್ಲದೆ ಅದೇ ದಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವೂ ಆಶ್ರಮಕ್ಕೆ ಭೇಟಿ ನೀಡಿತ್ತು. ಆದರೆ ಮಹಿಳೆಯರು ಸಾವನ್ನಪ್ಪಿದ್ದ ವಿಷಯವನ್ನು ಸಿಬ್ಬಂದಿಗಳು ಆಗ ತಿಳಿಸಿರಲಿಲ್ಲ ಎನ್ನಲಾಗಿದೆ.
ಪಾಟ್ನಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ ಸಂದರ್ಭ ಸಾವು ಸಂಭವಿಸಿದೆ ಎಂದು ಆಶ್ರಮದ ಅಧಿಕಾರಿಗಳು ತಿಳಿಸಿದ್ದರೆ, ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ರಾಜ್ಯ ಸರಕಾರದ ಅನುದಾನಿತ ಆಶ್ರಮದಲ್ಲಿ 30 ಬಾಲಕಿಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಭಾರೀ ಒತ್ತಡ ಎದುರಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಈ ಪ್ರಕರಣ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಸಾಕ್ಷಿಯಾಗಿದ್ದ ಬಾಲಕಿ ನಾಪತ್ತೆ
ಈ ಮಧ್ಯೆ, ಮುಝಫರ್‌ಪುರದ ಆಶ್ರಮದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಅಲ್ಲಿದ್ದ 44 ಬಾಲಕಿಯರನ್ನು ಮಧುಬನಿ ಆಶ್ರಮಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಸ್ಥಳಾಂತರ ಪ್ರಕ್ರಿಯೆಯ ಸಂದರ್ಭ 13ರ ಹರೆಯದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಈಕೆ ಮುಝಫರ್‌ಪುರ ಲೈಂಗಿಕ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಳು ಎನ್ನಲಾಗಿದೆ. ಈ ಬಾಲಕಿಗೆ ಎಲ್ಲಾ ವಿಷಯ ತಿಳಿದಿತ್ತು. ಅವಳನ್ನು ಮುಝಫರ್‌ಪುರದಿಂದ ಮಧುಬನಿ ಆಶ್ರಮಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಮಧುಬನಿ ಆಶ್ರಮವು ನಿತೀಶ್ ಕುಮಾರ್ ಅವರ ಬೆಂಬಲಿಗ ಸಂಜಯ್ ಝಾ ಅವರ ಉಸ್ತುವಾರಿಯಲ್ಲಿದೆ. ಬಾಲಕಿಯನ್ನು ತಕ್ಷಣ ಹಾಜರು ಪಡಿಸದಿದ್ದರೆ ಮಧುಬನಿಯಲ್ಲಿ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ತಿಳಿಸಿದ್ದಾರೆ.