×
Ad

ಉಡುಪಿ: ಬಿಜೆಪಿ ಮಹಿಳಾ ಮಣಿಗಳ ಡ್ಯಾನ್ಸ್ ವೀಡಿಯೊ ವೈರಲ್

Update: 2018-08-12 20:11 IST

ಉಡುಪಿ, ಆ.12: ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಸದಸ್ಯರು ಪಕ್ಷದ ಬಾವುಟ ಹಿಡಿದುಕೊಂಡು ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಹಳಷ್ಟು ಟೀಕೆಗೆ ಗುರಿ ಯಾಗಿದೆ.

ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನ ಗಣೇಶ್, ನಗರಸಭೆ ಸದಸ್ಯೆ ರಶ್ಮಿತಾ ಬಾಲಕೃಷ್ಣ, ಪದಾಧಿಕಾರಿಯಾದ ವೀಣಾ ಶೆಟ್ಟಿ ಸೇರಿದಂತೆ ಹಲವು ಮಂದಿ ಮಹಿಳಾ ನಾಯಕಿಯರು ಪಕ್ಷದ ಕಚೇರಿಯಲ್ಲಿ ‘ರಂಗೀಲೊ ಮಾರೋ ಡೋಲ್ನಾ’ ಎಂಬ ಹಿಂದಿ ಹಾಡಿಗೆ ಕುಣಿಯುವ ವೀಡಿಯೊ ಇದೀಗ ಫೇಸ್ ಬುಕ್ ಹಾಗೂ ವಾಟ್ಸ್ಆ್ಯಪ್ ಗಳಲ್ಲಿ ವೈರಲ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.

ಇತ್ತೀಚೆಗೆ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯ ಬಳಿಕ ಮಹಿಳಾ ಪದಾಧಿಕಾರಿಗಳು ಕುಣಿದಿರುವ ವೀಡಿಯೊ ಎಂಬುದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿದ್ದು, ನೃತ್ಯ ಮಾಡುವವರು ಕೈಯಲ್ಲಿ ಧ್ವಜ ಹಿಡಿದುಕೊಂಡಿರುವ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಮಹಿಳಾ ಮೋರ್ಚಾದ ಪದಾಧಿಕಾರಿಯೊಬ್ಬರು ಇದನ್ನು ನಿರಾಕರಿಸಿದ್ದು, ಇದು ಕಳೆದ ಬಾರಿ ಚುನಾವಣಾ ಗೆಲುವಿನ ಸಂದರ್ಭದಲ್ಲಿ ಮಾಡಿದ ನೃತ್ಯ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವಂತೆ ಇದು ಆಟಿ ಕಾರ್ಯಕ್ರಮದಲ್ಲಿ ನಡೆಸಿದ ನೃತ್ಯ ಅಲ್ಲ. ಇದರಲ್ಲಿ ಯಾವುದೇ ಅಸಭ್ಯತೆ ಇಲ್ಲ. ಮಹಿಳಾ ಪದಾ ಧಿಕಾರಿಗಳೇ ಸೇರಿಕೊಂಡು ಪಕ್ಷದ ಕಚೇರಿಯಲ್ಲಿ ಬಾಗಿಲು ಹಾಕಿ ಮಾಡಿರುವ ನೃತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೊ ಇತ್ತೀಚೆಗೆ ನಡೆಸಿರುವ ನೃತ್ಯ ಅಲ್ಲ. ಅದು ಕಳೆದ ವರ್ಷದ ಹಳೆಯ ವೀಡಿಯೊ ಆಗಿದೆ. ಆದರೂ ಇದರಲ್ಲಿ ಅಶಿಸ್ತು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಪಕ್ಷದ ಹಿರಿಯರಾದ ಶೀಲಾ ಕೆ.ಶೆಟ್ಟಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ವರದಿ ಪಡೆದು ಕೊಳ್ಳಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News