ಪೊಲೀಸ್ ವಶದಲ್ಲಿದ್ದ ಉಡುಪಿ ಶಿರೂರು ಮಠ ಸೋದೆ ಮಠದ ಸುಪರ್ದಿಗೆ
ಉಡುಪಿ, ಆ.12: ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿದ್ದ ಉಡುಪಿ ರಥಬೀದಿಯಲ್ಲಿರುವ ಶೀರೂರು ಮಠವನ್ನು ಆ.13ರಂದು ದ್ವಂದ್ವ ಮಠವಾದ ಸೋದೆ ಮಠದ ಸುಪರ್ದಿಗೆ ನೀಡಲಾಗುತ್ತಿದೆ.
ಜು.19ರಂದು ಸ್ವಾಮೀಜಿಯ ನಿಗೂಢ ಸಾವಿನ ಬಳಿಕ ಪೊಲೀಸರು, ತನಿಖೆಗಾಗಿ ಉಡುಪಿಯಲ್ಲಿರುವ ಶಿರೂರು ಮಠ ಹಾಗೂ ಹಿರಿಯಡ್ಕದಲ್ಲಿರುವ ಮೂಲ ಮಠವನ್ನು ಸುಪರ್ದಿಗೆ ಪಡೆದುಕೊಂಡು ಬಿಗಿ ಭದ್ರತೆ ಒದಗಿಸಿದ್ದರು. ಇದರಿಂದ ಮಠದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
‘ಪೊಲೀಸರ ವಶದಲ್ಲಿದ್ದ ಉಡುಪಿಯ ಶಿರೂರು ಮಠವನ್ನು ಸೋದೆ ಮಠಕ್ಕೆ ಬಿಟ್ಟು ಕೊಡಲಾಗುತ್ತಿದೆ. ಅದೇ ರೀತಿ ಸದ್ಯವೇ ಪೊಲೀಸ್ ಇಲಾಖೆ ಮೂಲ ಶೀರೂರು ಮಠವನ್ನೂ ಕೂಡ ಸೋದೆ ಮಠಕ್ಕೆ ಬಿಟ್ಟು ಕೊಡಲಿದೆ ಎಂದು ಸೋದೆ ಮಠದ ದಿವಾನ ಪಿ. ಶ್ರೀನಿವಾಸ ತಂತ್ರಿ ತಿಳಿಸಿದ್ದಾರೆ.
ಮಠದ ಹಸ್ತಾಂತರ ಪ್ರಕ್ರಿಯೆ ಮುಗಿದ ಕೂಡಲೇ ಸ್ವಾಮೀಜಿಯ ಆರಾಧನೆಯನ್ನು ನಡೆಸಲಾಗುವುದು. ಇತ್ತೀಚಿಗೆ ಶಿರೂರು ಸ್ವಾಮೀಜಿ ನಡೆಸಲುದ್ದೇಶಿಸಿದ ವನಮಹೋತ್ಸವಕ್ಕೆ ತಂದ ಸಸಿಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈವರೆಗೆ ಉಡುಪಿಯ ಶಿರೂರು ಮಠಕ್ಕೆ ಎಎಸ್ಸೈ ರತ್ನಾಕರ್ ನೇತೃತ್ವದಲ್ಲಿ 10 ಮಂದಿ ಪೊಲೀಸರು ಬೆಳಗ್ಗಿನ ಪಾಳಿ ಹಾಗೂ ಎಎಸ್ಸೈ ನಾರಾಯಣ ನೇತೃತ್ವ ದಲ್ಲಿ 15 ಪೊಲೀಸರು ರಾತ್ರಿ ಪಾಳಿಯಲ್ಲಿ ಭದ್ರತೆಯನ್ನು ಒದಗಿಸುತ್ತಿದ್ದರು. ನಾಳೆಯಿಂದ ಈ ಭದ್ರತೆಯನ್ನು ಇಲಾಖೆ ಹಿಂದಕ್ಕೆ ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಶಿರೂರು ಮೂಲ ಮಠದಲ್ಲಿದ್ದ ಮುಖ್ಯಪ್ರಾಣ ದೇವರ ಬೆಳ್ಳಿಯ ಮುಖ ವಾಡ, ಚಿನ್ನಾಭರಣಗಳು, ಬೆಳ್ಳಿಯ ಆಭರಣಗಳು, ಪೂಜಾ ಸಾಮಗ್ರಿ ಸೇರಿದಂತೆ ಬೆಳೆಬಾಳುವ ಸೊತ್ತುಗಳನ್ನು ಸುರಕ್ಷತೆಯ ದೃಷ್ಠಿಯಿಂದ ಆ. 1ರಂದು ದ್ವಂದ್ವ ಮಠದ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪೊಲೀಸರ ಸಮ್ಮುಖದಲ್ಲಿ ಉಡುಪಿಯ ಶಿರೂರು ಮಠದ ಲಾಕರ್‌ನಲ್ಲಿ ತಂದಿಸಿದ್ದರು.
‘ಸದ್ಯಕ್ಕೆ ಉಡುಪಿಯಲ್ಲಿರುವ ಶಿರೂರು ಮಠವನ್ನು ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಸೋಮವಾರ ಹಸ್ತಾಂತರ ಮಾಡಲಾಗುವುದು. ಆದರೆ ಮೂಲಮಠ ವನ್ನು ಒಪ್ಪಿಸುವ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಅಲ್ಲಿಯವರೆಗೆ ಮೂಲಮಠಕ್ಕೆ ನೀಡಿರುವ ಪೊಲೀಸ್ ಭದ್ರತೆ ಮುಂದುವರೆಯುತ್ತದೆ.’
-ಲಕ್ಷ್ಮಣ್ ಬ.ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.