ಪರಿಶ್ರಮದಿಂದ ಮುಂದಿನ ವೃತ್ತಿ ಬದುಕು ಸುಭದ್ರ: ಡಾ.ಮೋಹನದಾಸ್

Update: 2018-08-12 15:17 GMT

ಶಿರ್ವ, ಆ.12: ಉನ್ನತ ಶಿಕ್ಷಣಕ್ಕಾಗಿ ತಾಂತ್ರಿಕ ಪದವಿಯನ್ನು ಆಯ್ಕೆ ಮಾಡಿರುವುದು ಖಂಡಿತ ಮೂರ್ಖತನವಲ್ಲ. ಇದು ಅತ್ಯಂತ ಸೂಕ್ತ ಆಯ್ಕೆ. ಆದರೆ ಅದಕ್ಕೆ ಪೂರಕವಾಗಿ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಪರಿಶ್ರಮವು ಮುಂದಿನ ವೃತ್ತಿ ಬದುಕಿನ ಸುಗಮ, ಸುಭದ್ರ ಅಭಿವೃದ್ದಿಗೆ ಕಾರಣ ವಾಗುತ್ತದೆ ಎಂದು ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆಯ ಮಾಜಿ ನಿರ್ದೇಶಕ ಡಾ.ಎನ್.ಮೋಹನದಾಸ್ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2018 -19ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ರವಿವಾರ ಸಂಸ್ಥೆಯ ಆವರಣದಲ್ಲಿ ಉದ್ಘಾಟಿಸಿದ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ಪಿ. ಶ್ರೀನಿವಾಸ ತಂತ್ರಿ ವಹಿಸಿದ್ದರು. ಈ ಸಂದರ್ದಲ್ಲಿ ಪ್ರಥಮ ವರ್ಷಕ್ಕೆ ಸೇರ್ಪಡೆ ಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯ ಹರೀಶ್ ಬೆಳ್ಮಣ್ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ. ತಿರುಮಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೊಲಿಟ ಪ್ರಿಯ ಕ್ಯಾಸ್ತಲಿನೊ ಸಂಸ್ಥೆಯ ಮತ್ತು ವಿಶ್ವವಿದ್ಯಾಲಯದ ನಿಯಮಾವಳಿಗಳ ಬಗ್ಗೆ ವಿವರ ನೀಡಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರೀನ ಕುಮಾರಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.

ಕಾರ್ಯಕ್ರಮದ ಸಂಯೋಜಕಿ ಉಷಾ ಪಾರ್ವತಿ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ನಾವಡ ವಂದಿಸಿದರು. ಉಪನ್ಯಾಸಕರಾದ ಶರೀನ್ ನೊರೊನ್ಹಾ ಹಾಗೂ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News