ಭಾರತದ ಸಾಗರೋತ್ತರ ಪ್ರಜೆಗಳೂ ಸಮಾನ ಹಕ್ಕುಗಳನ್ನು ಹೊಂದಿರುವಂತಿದೆ: ಹೈಕೋರ್ಟ್

Update: 2018-08-12 17:07 GMT

ಹೊಸದಿಲ್ಲಿ, ಆ.12: ಭಾರತದ ಸಾಗರೋತ್ತರ ಪ್ರಜೆಗಳೂ ಇತರ ಭಾರತೀಯರು ಹೊಂದಿರುವ ಎಲ್ಲಾ ಹಕ್ಕುಗಳನ್ನು ಹೊಂದಿರುವಂತೆ ಕಾಣುತ್ತದೆ ಎಂದು ದಿಲ್ಲಿಯ ಹೈಕೋರ್ಟ್ ತಿಳಿಸಿದೆ.

ಅಮೆರಿಕದಲ್ಲಿ ನೆಲೆಸಿರುವ, ಭಾರತೀಯ ಮೂಲದ ವೈದ್ಯ ಡಾ ಕ್ರಿಸ್ತೊ ಥಾಮಸ್ ಫಿಲಿಪ್ ತನಗೆ ನೀಡಲಾಗಿದ್ದ ಒಸಿಐ(ಸಾಗರೋತ್ತರ ಭಾರತ ಪ್ರಜೆ) ಗುರುತುಪತ್ರವನ್ನು ರದ್ದುಪಡಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸಂದರ್ಭ ದಿಲ್ಲಿ ಹೈಕೋರ್ಟ್ , ಗುಪ್ತಚರ ವರದಿಯು ಯಾವ ಆಧಾರದಲ್ಲಿ ಒಸಿಐ ಗುರುತುಪತ್ರ ರದ್ದುಪಡಿಸಲು ಶಿಫಾರಸು ಮಾಡಿದೆ ಎಂಬುದನ್ನು ತಿಳಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.

1955ರ ಪೌರತ್ವ ಕಾಯ್ದೆಯ ಸೆಕ್ಷನ್ 7ಬಿ(1)ರ ಪ್ರಕಾರ ಉಪಸೆಕ್ಷನ್ (2)ರಲ್ಲಿ ಉಲ್ಲೇಖಿಸಿರುವುದನ್ನು ಹೊರತುಪಡಿಸಿ, ಎಲ್ಲಾ ಹಕ್ಕುಗಳೂ ಒಸಿಐ ಗುರುತುಪತ್ರ ಹೊಂದಿರುವವರಿಗೆ ದೊರಕುತ್ತದೆ. ಈ ಹಿನ್ನೆಲೆಯಲ್ಲಿ ಸಮಾನತೆ ಹಾಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಒಸಿಐ ಗುರುತುಪತ್ರ ಇದ್ದವರಿಗೂ ವಿಸ್ತರಿಸಿರುವಂತೆ ಕಾಣುತ್ತದೆ ಎಂದು ನ್ಯಾ. ವಿಭು ಬಖ್ರು ತಿಳಿಸಿದರು. ಗುಪ್ತಚರ ವರದಿಯಲ್ಲಿ ಅರ್ಜಿದಾರರು ಅಮೆರಿಕದಲ್ಲಿ ಜನಿಸಿರುವುದಾಗಿ ತಿಳಿಸಲಾಗಿದೆ. ಆದರೆ ಇದನ್ನು ಬಲವಾಗಿ ನಿರಾಕರಿಸಿರುವ ಅರ್ಜಿದಾರರು ತಾನು ಕೇರಳದಲ್ಲಿ ಹುಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅರ್ಜಿದಾರರು ಮೆಡಿಕಲ್ ಮಿಷನರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ಇದಕ್ಕೆ ಪೂರಕವಾದ ಪುರಾವೆಯನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಭಾರತೀಯ ವಲಸಿಗರ ಬೇಡಿಕೆಯಾದ ಅವಳಿ ಪೌರತ್ವಕ್ಕೆ ಪ್ರತಿಯಾಗಿ ಒಸಿಐ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ತಾನು ಭಾರತದಲ್ಲಿ ಸಂಚಾರಿ ಕ್ರೈಸ್ತಬೋಧನೆ ಚಟುವಟಿಕೆಯಲ್ಲಿ ತೊಡಗಿದ್ದು, ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಮಸ್ಯೆಯಾಗುತ್ತಿದೆ ಎಂದು ತನ್ನ ಮೇಲೆ ಹೊರಿಸಲಾಗಿರುವಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಡಾ ಕ್ರಿಸ್ತೊ ಥಾಮಸ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಭಾರತವನ್ನು ಸಂದರ್ಶಿಸಲು ಡಾ. ಕ್ರಿಸ್ತೊ ಥಾಮಸ್‌ಗೆ ಜೀವಿತಾವಧಿಯ ವೀಸಾವನ್ನು 2012ರ ನವೆಂಬರ್ 22ರಂದು ಭಾರತ ಸರಕಾರ ನೀಡಿತ್ತು. ಅದರಂತೆ ಬಿಹಾರದ ಡಂಕನ್ ಆಸ್ಪತ್ರೆಯಲ್ಲಿ ಸ್ವಯಂಸೇವಕ ವೈದ್ಯರಾಗಿ ಸೇವೆ ಸಲ್ಲಿಸಲು ತಾನು ಹಲವು ಬಾರಿ ಭಾರತಕ್ಕೆ ಆಗಮಿಸಿದ್ದೇನೆ. ಆದರೆ 2016ರ ಎಪ್ರಿಲ್ 26ರಂದು ತನ್ನನ್ನು ಹೊಸದಿಲ್ಲಿಯ ಇಂದಿರಾಗಾಂಧಿ ವಿಮಾನಿಲ್ದಾಣದಲ್ಲಿ ‘ಅಕ್ರಮವಾಗಿ ಗಡೀಪಾರು’ ಮಾಡಲಾಗಿದೆ ಎಂದು ದೂರಿದ್ದ ಥಾಮಸ್, ಅಮೆರಿಕದ ಹ್ಯೂಸ್ಟನ್‌ನಲ್ಲಿರುವ ಭಾರತೀಯ ದೂತಾವಾಸವು ತನ್ನ ಒಸಿಐ ಗುರುತುಪತ್ರವನ್ನು ರದ್ದುಪಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಈ ಕುರಿತು ಕೇಂದ್ರ ಸರಕಾರವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ತಿಳಿಸಿದ್ದ ಹೈಕೋರ್ಟ್, ಭಾರತೀಯ ದೂತಾವಾಸದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸೂಚಿಸಿತ್ತು. ಆದರೆ ಪುನರ್ಪರಿಶೀಲನಾ ಪ್ರಾಧಿಕಾರ ದೂತಾವಾಸದ ಆದೇಶವನ್ನು ಎತ್ತಿಹಿಡಿದಿತ್ತು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ ಕೇರಳದಲ್ಲಿರುವ ಕುಟುಂಬದ ಸದಸ್ಯರನ್ನು ಭೇಟಿಯಾಗಲು ತನಗೆ ಅವಕಾಶ ಮಾಡಿಕೊಡಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News