×
Ad

ಬೆಳ್ತಂಗಡಿ: ಗಾಳಿ-ಮಳೆಯಿಂದ ಎರಡು ಮನೆಗಳಿಗೆ ಹಾನಿ

Update: 2018-08-12 22:45 IST

ಬೆಳ್ತಂಗಡಿ, ಆ. 12: ತಾಲೂಕಿನಲ್ಲಿ  ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ರವಿವಾರವೂ ಮುಂದುವರಿದಿದ್ದು ತಾಲೂಕಿನಲ್ಲಿ ನದಿ ಹಳ್ಳಗಳು ತುಂಬಿ ಹರಿಯುತ್ತಿದೆ. ಸೋಮವಾರವೂ ಮಳೆ ಮುಂದುವರಿಯುವ ಸೂಚನೆಯಿದ್ದು ತಾಲೂಕಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನೇತ್ರಾವತಿ, ಫಲ್ಗುಣಿ, ಅಣಿಯೂರು ಹಳ್ಳ ಸೋಮಾವತಿ, ಕಪಿಲ, ಸೇರಿದಂತೆ ಬಹುತೇಕ ನದಿಗಳು ತುಂಬಿ ತುಳಿಕಿದ್ದು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದೆ. ಮಳೆಯಿಂದಾಗಿ ಜನರು ಮನೆಗಳಿಂದ ಹೊರ ಬರಲು ಹಿಂಜರಿಯುತ್ತಿದ್ದು  ನಗರಗಳಲ್ಲಿ ಜನ ಸಂಚಾರ ವಿರಳವಾಗಿದೆ. ಮುಂಜಾಗ್ರತಾ ಕ್ರಮವಾಗಿ  ಸೋಮವಾರವೂ ತಾಲೂಕಿನ ಶಾಲಾ ಮತ್ತು ಪಿಯು ಕಾಲೇಜಿಗೆ ರಜೆಯನ್ನು ಘೋಷಿಸಲಾಗಿದೆ.

ನಿರಂತರ ಗಾಳಿ-ಮಳೆಯಿಂದ ರವಿವಾರ ಎರಡು ಮನೆಗಳು ಭಾಗಶ ಕುಸಿದಿದ್ದು ಹಾನಿಯಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಳೇಕೊಟೆ ನಿವಾಸಿ ಹರೀಶ ಅವರ ಮನೆಯ ಗೋಡೆ ಕುಸಿತದಿಂದ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯೊಳಗೆ ನೀರು ನುಗ್ಗಿದ್ದು ಮಳೆ ನೀರಿನಿಂದ ದಾಖಲೆ ಪತ್ರಗಳು ಮನೆಯಲ್ಲಿದ್ದ ಎಲ್ಲ ವಸ್ತುಗಳು ತೋಯ್ದು ನಾಶವಾಗಿದೆ. ದಸಂಸ(ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಬಿ.ಕೆ ವಸಂತ ಮತ್ತು ಇತರರ ಸಹಕಾರದಿಂದ ಮನೆಯವನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದಾರೆ. ಗ್ರಾಮಕರಣಿಕ ಮಹೇಶ್, ಸಹಾಯಕ ಸತೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇ ರೀತಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಕಣಿ ನಿವಾಸಿ ಕೃಷ್ಣ ಮನೆಯ ಗೋಡೆ ಕುಸಿತಗೊಂಡು ಮನೆಗೆ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News