ಮೊಬೈಲ್ ಅಂಗಡಿಯಲ್ಲಿ ಕಳವು ಪ್ರಕರಣ: ಆರೋಪಿಗಳಿಗೆ ಶಿಕ್ಷೆ
ಉಡುಪಿ, ಆ.13: ಆರು ವರ್ಷಗಳ ಹಿಂದೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಉಡುಪಿ ಉಡುಪಿ ಒಂದನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಆ.10ರಂದು ಆದೇಶ ನೀಡಿದೆ.
ಮೂಡುತೋನ್ಸೆ ಗ್ರಾಮದ ವಿಶ್ವನಾಥ ಮತ್ತು ಭಟ್ಕಳದ ಮಹೇಶ ನಾಯಕ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು. ಈ ಪ್ರಕರಣದ ಇನ್ನೋರ್ವ ಆರೋಪಿ ಕೊಡವೂರು ಗ್ರಾಮದ ಸಂತೋಷ ಬಂಗೇರ ಮೃತಪಟ್ಟಿದ್ದಾರೆ.
2012ರ ನ.5ರಂದು ರಾತ್ರಿ ಒಂದು ಗಂಟೆಗೆ ಪಝಿಲ್ ಸಾಹೇಬ್ ಎಂಬ ವರ ಕನೆಕ್ಟಿಂಗ್ ಪಾಯಿಂಟ್ ಮೊಬೈಲ್ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಆರೋಪಿಗಳು, ಒಟ್ಟು 19,000 ರೂ. ಮೌಲ್ಯದ ಏಳು ಮೊಬೈಲ್ಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಉಡುಪಿ ನಗರ ಠಾಣೆಯ ಆಗಿನ ಪೋಲೀಸ್ ಉಪನಿರೀಕ್ಷಕ ಲಿಂಗರಾಜು ಎಚ್. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿ ದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ ಎಂ, ಆರೋಪಿಗಳ ವಿರುಧ್ದ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗಳಿಗೆ ಭಾ.ದಂ.ಸಂ. ಕಲಂ 457, 380ರಡಿ ಎರಡು ವರ್ಷ ಶಿಕ್ಷೆ ಮತ್ತು ಒಟ್ಟು 2,000ರೂ. ದಂಡ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಅಂದಿನ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಜ್, ನಂತರ ಈಗಿನ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.