×
Ad

ಸ್ವಸ್ಥ ಸಮಾಜ ಗುರಿಯಾಗಬೇಕು: ಶೀಲಾ ಕೆ.ಶೆಟ್ಟಿ

Update: 2018-08-13 22:20 IST

ಉಡುಪಿ, ಆ.13: ಆರೋಗ್ಯವಂತ ಪ್ರಜೆ ದೇಶದ ಆಸ್ತಿ. ಆದ್ದರಿಂದ ಸ್ವಸ್ಥ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.

ಸೋಮವಾರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮುಂದುವರಿದ ಗ್ರಾಮ ಸ್ವರಾಜ್ ಅಭಿಯಾನದಡಿ ‘ಮಿಷನ್ ಇಂದ್ರಧನುಷ್’ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಯುವ ಭಾರತ ಜೊತೆಗೆ ಸ್ವಸ್ಥ ಭಾರತವೂ ಆಗಬೇಕು. ಆದ್ದರಿಂದ ಲಸಿಕೆ, ಪೌಷ್ಟಿಕ ಆಹಾರ, ವ್ಯಾಯಾಮದ ಕುರಿತು ಜಾಗೃತರಾಗಬೇಕು ಎಂದರು. ಮಕ್ಕಳ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ದಿಸುವತ್ತ ಮಹಿಳೆಯರು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಕುಸುಮಾ ಪೂಜಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿ, ಮಂಜುನಾಥ ಆಲಂದೂರು ಕಾರ್ಯಕ್ರಮ ನಿರೂಪಿಸಿದರು. ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್, ಡಾ. ಮಹಾಬಲ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News