ಮಟ್ಕಾ ಆರೋಪಿಗಳ ಪರೇಡ್: ಎಸ್ಪಿಯಿಂದ ಕಠಿಣ ಕ್ರಮದ ಎಚ್ಚರಿಕೆ

Update: 2018-08-13 17:16 GMT

ಉಡುಪಿ, ಆ.13: ಮಟ್ಕಾ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಜಿಲ್ಲೆಯ ಮಟ್ಕಾ ಪ್ರಕರಣದ ಆರೋಪಿಗಳನ್ನು ಕಚೇರಿಗೆ ಕರೆದು ಪರೇಡ್ ನಡೆಸಿದ್ದಾರೆ.

ಜು.12ರಂದು 30 ಮಂದಿ ಹಾಗೂ ಇಂದು ಮತ್ತೆ 30 ಮಂದಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಕಚೇರಿಯ ಆವರಣದಲ್ಲಿ ಪರೇಡ್ ನಡೆಸಿ ಎಚ್ಚರಿಕೆ ನೀಡಿದರು. ನಾಳೆ ಮತ್ತೆ 15 ಮಂದಿ ಆರೋಪಿಗನ್ನು ಪರೇಡ್‌ಗೆ ಒಳಪಡಿಸಲಿದ್ದಾರೆ.

‘ಮಟ್ಕಾ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಎಚ್ಚರಿಕೆಗಳನ್ನು ನೀಡಲಾಗಿತ್ತು. ಇಷ್ಟೆಲ್ಲ ಎಚ್ಚರಿಕೆ, ಕ್ರಮ ತೆಗೆದುಕೊಂಡರೂ ದಂಧೆ ಮುಂದುವರೆಯುತ್ತಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಒಟ್ಟು 60 ಆರೋಪಿಗಳು, ಕಿಂಗ್‌ಪಿನ್‌ಗಳು, ಬಿಡ್ಡರ್‌ಗಳನ್ನು ಕರೆಸಿ ಮುಂದಿನ ಕ್ರಮದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು

ಈಗಾಗಲೇ ಜಿಲ್ಲೆಯಾದ್ಯಂತ ಮಟ್ಕಾ ದಂಧೆಯ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದು, ಆ.11ರಂದು ಒಂದೇ ದಿನ ಜಿಲ್ಲೆಯಾದ್ಯಂತ 30 ಮಟ್ಕಾ ಪ್ರಕರಣ ಗಳನ್ನು ದಾಖಲಿಸಿ ಹಲವರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆ ಇನ್ನಷ್ಟು ತೀವ್ರವಾಗಿ ಮುಂದುವರೆಯಲಿದೆ ಎಂದು ಅವರು ಹೇಳಿದರು.

ಇನ್ನು ಈ ದಂಧೆ ಮುಂದುವರೆಸುವ ಆರೋಪಿಗಳ ವಿರುದ್ಧ ಗಡಿಪಾರು ಅಥವಾ ಗೂಂಡಾ ಕಾಯಿದೆಯಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಪೊಲೀಸ್ ಇಲಾಖೆ ನಿರ್ಧರಿಸಿದೆ. ಇಷ್ಟಾದರೂ ಮಟ್ಕಾ ದಂಧೆ ಮುಂದುವರೆದರೆ ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನೇ ಜವಾ ಬ್ದಾರರನ್ನಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News