ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ನಿಧನ: ಸಂತಾಪ

Update: 2018-08-13 17:22 GMT

ಮಂಗಳೂರು, ಆ.13: ಸಿಪಿಎಂ ನಾಯಕ, ಮಾಜಿ ಲೋಕಸಭಾ ಸದಸ್ಯರೂ ಆಗಿದ್ದ ಸೋಮನಾಥ ಚಟರ್ಜಿ (89) ಸೋಮವಾರ ಬೆಳಗ್ಗೆ ಹೃದಯಾ ಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ನಾಯಕರ ನಿಧನಕ್ಕೆ ಸಿಪಿಎಂ ದ.ಕ. ಜಿಲ್ಲಾ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ.

ಕೆಲವು ಸಮಯದಿಂದ ಮೂತ್ರಪಿಂಡ ಕಾಯಿಲೆಗೆ ಒಳಗಾಗಿ ಅದಕ್ಕೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಡಯಾಲಿಸಿಸ್ ಚಿಕಿತ್ಸೆ ನಡೆಸಲಾಗುತ್ತಿದ್ದಾಗಲೇ ಅವರಿಗೆ ಲಘು ಹೃದಯಾಘಾತವಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಕಳೆದ ತಿಂಗಳು ಅವರು ಪಾಶ್ವವಾಯುವಿಗೆ ಗುರಿಯಾಗಿದ್ದರು. ಈ ಎಲ್ಲ ಕಾಯಿಲೆಗಳಿಗೆ ಸುಮಾರು 40 ದಿನಗಳಿಂದಲೂ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಿಸಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಅವರ ಅನಾರೋಗ್ಯ ಪುನಃ ಉಲ್ಬಣಗೊಂಡು ಆ.12ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ.13ರಂದು ಬೆಳಗ್ಗೆ ನಿಧನರಾಗಿದ್ದು, ದೇಶಕ್ಕೆ ತುಂಬಲಾಗದ ನಷ್ಡ ಉಂಟಾಗಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ.

ಸೋಮನಾಥ ಚಟರ್ಜಿ 1968ರಲ್ಲಿ ಸಿಪಿಎಂ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, 10 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಉತ್ತಮ ವಾಗ್ಮಿಯಾಗಿದ್ದರು. ಪಕ್ಷದ ಕೇಂದ್ರ ಸಮಿತಿಯ ಸದಸ್ಯರೂ ಆಗಿದ್ದರು. 2004ರಿಂದ 2009ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು. ಈ ಮಹಾನ್ ನಾಯಕರ ನಿಧನಕ್ಕೆ ಸಿಪಿಎಂ ದ.ಕ. ಜಿಲ್ಲಾ ಸಮಿತಿ ತೀವ್ರ ಶೋಕವನ್ನು ವ್ಯಕ್ತಪಡಿಸಿದೆ ಎಂದು ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News