ನಗರಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಮೂವರು ಹಾಲಿ ಸದಸ್ಯರಿಗೆ ಟಿಕೇಟ್

Update: 2018-08-13 17:30 GMT

ಉಡುಪಿ, ಆ.13: ಇದೇ ಆ.29ರಂದು ಉಡುಪಿ ನಗರಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಮೂವರು ಹಾಲಿ ಸದಸ್ಯರು ಸೇರಿದಂತೆ ಒಟ್ಟು 32 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಇಂದು ಪ್ರಕಟಿಸಿದೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಪಟ್ಟಿಯನ್ನು ಬಿಡುಗಡೆಗೊಳಿಸಿದರು. ನಗರಸಭೆಯ 35 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 32 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಉಳಿದ ಮೂವರು ಅಭ್ಯರ್ಥಿಗಳ ಹೆಸರನ್ನು ನಾಳೆ ಪ್ರಕಟಿಸುವುದಾಗಿ ಅವರು ತಿಳಿಸಿದರು.

ಸತತ ಮೂರು ಬಾರಿ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ಸದಸ್ಯ ಮಹೇಶ್ ಠಾಕೂರ್ ಈ ಬಾರಿ ಬೈಲೂರು ವಾರ್ಡಿನಿಂದ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಕಳೆದೆರಡು ನಗರಸಭೆಗಳಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ್ದ ಸುಮಿತ್ರಾ ಆರ್. ನಾಯಕ್ ಮ್ತೆ ಪರ್ಕಳದಿಂದ ಸ್ಪರ್ಧೆಯಲ್ಲಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಟಿಕೇಟ್‌ನಿಂದ ಗೆದ್ದು ಕೊನೆಯ ಹಂತದಲ್ಲಿ ಬಿಜೆಪಿಗೆ ನೆಗೆದ ಗೀತಾ ದೇವರಾಯ ಶೇಟ್ ಕಡಿಯಾಳಿಯಿಂದಲೇ ಮತ್ತೆ ಸ್ಪರ್ಧಿಸು ತಿದ್ದಾರೆ. ಇನ್ನುಳಿದಂತೆ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಐದು ವರ್ಷಗಳ ಬಳಿಕ ಗುಂಡಿಬೈಲ್ ವಾರ್ಡಿನಿಂದ ಸ್ಪರ್ಧಿಸಿದ್ದರೆ, ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಡ್ಲಿನ್ ಕರ್ಕಡ ಈ ಬಾರಿ ಮಲ್ಪೆ ಸೆ  ಂಟ್ರಲ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿರುವ ಕೊಡವೂರು, ಕಕ್ಕುಂಜೆ ಹಾಗೂ ಸರಳೇಬೆಟ್ಟು ವಾರ್ಡುಗಳಿಗೆ ಇನ್ನಷ್ಟೇ ಅಭ್ಯರ್ಥಿಗಳನ್ನು ಹೆಸರಿಸಬೇಕಾಗಿದೆ. 35 ವಾರ್ಡುಗಳಲ್ಲೂ ಪ್ರತ್ಯೇಕ ಸಭೆ ನಡೆಸಿ 16 ಸದಸ್ಯರ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದ ಕಡೆಗಳಲ್ಲಿ ಎಲ್ಲರ ಮನವೊಲಿಸಿ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಈ ಬಾರಿ ಬಿಜೆಪಿ ಪರವಾದ ವಾತಾವರಣ ಕಂಡುಬಂದಿದ್ದು, ಬಿಜೆಪಿ ಕನಿಷ್ಠ 28 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಪಕ್ಷದ ಈ ಬಾರಿಯ ಪ್ರಣಾಳಿಕೆಯನ್ನು ಇನ್ನು ಎರಡು-ಮೂರು ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಭಟ್ ತಿಳಿಸಿದರು.

ಕುಂದಾಪುರ ಮತ್ತು ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ನಾಳೆ ಪ್ರಕಟಿಸಲಾಗುವುದು ಎಂದು ಮಟ್ಟಾರು ಪ್ರಕಟಿಸಿದರು. ಪಕ್ಷದ ಅಭ್ಯರ್ಥಿಗಳ ವಿವರ ಹೀಗಿದೆ.

ಕೊಳ: ಲಕ್ಷ್ಮೀ ಮಂಜುನಾಥ ಸಾಲಿಯಾನ್, ವಡಬಾಂಡೇಶ್ವರ: ಯೋಗೀಶ್ ಬಿ.ಸಾಲ್ಯಾನ್, ಮಲ್ಪೆ ಸೆಂಟ್ರಲ್:ಎಡ್ಲಿನ್ ಕರ್ಕಡ, ಕಲ್ಮಾಡಿ: ಸುಂದರ ಜೆ. ಕಲ್ಮಾಡಿ, ಮೂಡಬೆಟ್ಟು: ಶ್ರೀಶ ಭಟ್ ಕೊಡವೂರು, ಕೊಡಂಕೂರು: ಸಂಪಾವತಿ, ನಿಟ್ಟೂರು: ಸಂತೋಷ ಜತ್ತನ್ನ, ಸುಬ್ರಹ್ಮಣ್ಯ ನಗರ: ಜಯಂತಿ ಕೆ.ಪೂಜಾರಿ, ಗೋಪಾಲಪುರ: ಮಂಜುಳಾ ವಿ.ನಾಯಕ್, ಕರಂಬಳ್ಳಿ: ಗಿರಿಧರ ಆಚಾರ್ಯ, ಮೂಡುಪೆರಂಪಳ್ಳಿ: ಅರುಣಾ ಎಸ್.ಪೂಜಾರಿ, ಶೆಟ್ಟಿಬೆಟ್ಟು: ಅಶ್ವಿನಿ ಅರುಣ್ ಪೂಜಾರಿ, ಪರ್ಕಳ: ಸುಮಿತ್ರಾ ಆರ್.ನಾಯಕ್, ಈಶ್ವರನಗರ: ಮಂಜುನಾಥ ಶೆಟ್ಟಿಗಾರ್, ಮಣಿಪಾಲ: ಕಲ್ಪನಾ ಸುಧಾಮ.
ಮೂಡುಸಗ್ರಿ: ಭಾರತಿ ಪ್ರಶಾಂತ್, ಇಂದ್ರಾಳಿ: ಅಶೋಕ ನಾಯ್ಕ, ಇಂದಿರಾ ನಗರ: ಚಂದ್ರಶೇಖರ ಯು.ಶೇರಿಗಾರ್, ಬಡಗುಬೆಟ್ಟು: ಅರುಣ್ ಶೆಟ್ಟಿಗಾರ್, ಚಿಟ್ಪಾಡಿ: ಶ್ರೀಕೃಷ್ಣರಾವ್ ಕೊಡಂಚ, ಕಸ್ತೂರ್ಬಾ ನಗರ: ರಾಜು, ಕುಂಜಿಬೆಟ್ಟು: ಗಿರೀಶ ಎಂ.ಆಂಚನ್, ಕಡಿಯಾಳಿ: ಗೀತಾ ದೇವರಾಯ ಶೇಟ್, ಗುಂಡಿಬೈಲು: ಪ್ರಭಾಕರ ಪೂಜಾರಿ, ಬನ್ನಂಜೆ: ಸವಿತಾ ಹರೀಶ್ ರಾಂ ಭಂಡಾರಿ, ತೆಂಕಪೇಟೆ: ಮಾನಸಿ ಸಿ.ಪೈ, ಒಳಕಾಡು: ರಜನಿ ಹೆಬ್ಬಾರ್, ಬೈಲೂರು: ಮಹೇಶ ಠಾಕೂರ್, ಕಿನ್ನಿಮೂಲ್ಕಿ: ಜ್ಯೋತಿ ರಾಮನಾಥ ಶೆಟ್ಟಿ, ಅಜ್ಜರಕಾಡು: ರಶ್ಮಿ ಚಿತ್ತರಂಜನ್ ಭಟ್, ಶಿರಿಬೀಡು: ಟಿ.ಜಿ.ಹೆಗ್ಡೆ, ಅಂಬಲಪಾಡಿ: ಹರೀಶ್ ಶೆಟ್ಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News