ಆ.15: ‘ಹಸಿರು ಕರ್ನಾಟಕ’ ಯೋಜನೆ ಅನುಷ್ಠಾನ
ಮಂಗಳೂರು, ಆ.13: ಪ್ರಸಕ್ತ ಸಾಲಿನ ಜುಲೈ-2018ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ, ‘ಹಸಿರು ಕರ್ನಾಟಕ’ ಯೋಜನೆಯನ್ನು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಆ.15ರಿಂದ 18ರವರೆಗೆ ಗಿಡಗಳನ್ನು ನೆಟ್ಟು ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮವನ್ನು ಸಾಮಾಜಿಕ ಅರಣ್ಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಣ್ಣ-ಪುಟ್ಟ ಬೆಟ್ಟಗುಡ್ಡಗಳು, ಗೋಮಾಳಗಳು ಮತ್ತು ಕೆರೆಗಳ ಸುತ್ತಮುತ್ತಲಿನ ಸರಕಾರಿ ಜಮೀನುಗಳಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಬೆಳೆಯುವ ಸ್ಥಳೀಯ ಜಾತಿಯ ಮರ-ಗಿಡಗಳನ್ನು ವ್ಯಾಪಕವಾಗಿ ಬೆಳೆಸಲಾಗುವುದು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರ ಸಂಘಟನೆಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಸ್ವಯಂ ಸೇವಕರು, ಸಾರ್ವಜನಿಕರು ಹಾಗೂ ಇತರರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ‘ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರುಅರಣ್ಯ, ಜಿಲ್ಲೆಗೊಂದು ಕಾಡು’ ಬೆಳೆಸಿ ಹಸಿರು ಹೊದಿಕೆ ಹೆಚ್ಚಿಸುವುದು ಮುಖ್ಯ ಧ್ಯೇಯವಾಗಿದೆ.
ಆ.7ರಂದು ಜಿಲ್ಲಾಡಳಿತದಿಂದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು, ಸಭೆಯಲ್ಲಿ ನಿರ್ಣಯಿಸಿದಂತೆ, ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ನಿರ್ವಹಿಸುವ ಬಗ್ಗೆ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ, ಪೋಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್, ಶಾಲೆ-ಕಾಲೇಜುಗಳು, ಖಾಸಗಿ ಸಂಸ್ಥೆಗಳು, ಪೊಲೀಸ್ ಇಲಾಖಾ ಕಚೇರಿ ಮತ್ತು ವಸತಿಗೃಹಗಳ ಆವರಣ, ಗ್ರಾಮ ಅರಣ್ಯ ಸಮಿತಿಗಳು, ಸರಕಾರಿ ಕಚೇರಿ ಆವರಣ, ಸರಕಾರಿ ಆಸ್ಪತ್ರೆಗಳ ಆವರಣ, ಧಾರ್ಮಿಕ ಸಂಸ್ಥೆಗಳ ಆವರಣ, ಅಂಗನವಾಡಿ ಇತ್ಯಾದಿಗಳ ಆವರಣದ ಸರಕಾರಿ ಮತ್ತು ಖಾಸಗಿ ಲಭ್ಯ ಇರುವ 66 ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮವನ್ನು ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ನೇತೃತ್ವದಲ್ಲಿ ಸಸಿ ನೆಡುವ ಮತ್ತು ಸಸಿ ವಿತರಣೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಹಾಗೆಯೇ, ಮಂಗಳೂರು ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ‘ಹಸಿರು ಕರ್ನಾಟಕ’ ಕಾರ್ಯಕ್ರಮದ ಸಂದೇಶವನ್ನು ಸಾರ್ವಜನಿಕರಿಗೆ ನೀಡಲಿದ್ದಾರೆ. ಹಸಿರು ಕರ್ನಾಟಕ ಟ್ಯಾಬ್ಲೋವನ್ನು ಚಾಲನೆ ಮಾಡಲಿದ್ದಾರೆ.
ಇದೇ ರೀತಿಯಲ್ಲಿ ಪ್ರತೀ ತಾಲೂಕಿನಲ್ಲಿ, ಗ್ರಾಪಂ, ತಾಪಂ ಕಚೇರಿಗಳಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳ ಮತ್ತು ಗಾಪಂ/ತಾಪಂ ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಂದು ಕಾರ್ಯಕ್ರಮವನ್ನು ನಡೆಸುವುದಾಗಿ ನಿರ್ಧರಿಸಲಾಗಿದೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.