×
Ad

ಮೊಗೇರ್ ಸಮಾಜಕ್ಕೆ ಪ.ಜಾ. ಸಿಂಧುತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Update: 2018-08-13 23:48 IST

ಭಟ್ಕಳ, ಆ. 13: ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಭಟ್ಕಳದಲ್ಲಿ ಸೋಮವಾರ ಮೊಗೇರ್ ಸಮಾಜದವರು ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಧರಣಿ ನಡೆಸಿದರು.

ಇಲ್ಲಿನ ವೆಂಕಟಾಪುರದ ಶ್ರೀನಿವಾಸ ಸಭಾಗೃಹದಿಂದ ಹೊರಟ ಸುಮಾರು 10 ಸಾವಿರಕ್ಕೂ ಹೆಚ್ಚು ಮೊಗೇರ ಸಮಾಜದ ಪ್ರತಿಭಟನಾಕಾರರು ಸುರಿಯುವ ಮಳೆಯನ್ನೂ ಲೆಕ್ಕಿಸದೇ ಹೆದ್ದಾರಿಯಲ್ಲಿ 5 ಕಿ.ಮೀ ದೂರ ಕ್ರಮಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಧರಣಿ ಕುಳಿತರು. ಮೆರವಣಿಗೆಯುದ್ದಕ್ಕೂ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.

ಧರಣಿಯಲ್ಲಿ ಮಾತನಾಡಿದ ಮೊಗೇರ ಸಮಾಜದ ಅಧ್ಯಕ್ಷ ಕೆ.ಎಂ ಕರ್ಕಿ, ಉತ್ತರಕನ್ನಡ ಜಿಲ್ಲೆಯ ಮೊಗೇರ ಸಮಾಜದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ಅಂತಿಮ ತೀರ್ಪನ್ನು ಆಧರಿಸಿ,ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನಂತೆ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು, ನ್ಯಾಯಾಲಯಗಳ ಆದೇಶವನ್ನು ಧಿಕ್ಕರಿಸಿ ಪ್ರಮಾಣ ಪತ್ರ ವಿತರಿಸದೇ ಮೊಗೇರ ಸಮಾಜಕ್ಕೆ ಅನ್ಯಾಯ ಎಸಗಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದರು.

ವಕೀಲ ನಾಗರಾಜ ಈ.ಎಚ್ ಮಾತನಾಡಿ, ನಂತರ ತಹಶೀಲ್ದಾರ್ ವಿ.ಎನ್ ಬಾಡಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪರಿಶಿಷ್ಟ ಜಾತಿಯವರಾದ ನಮ್ಮ ಮೊಗೇರ ಸಮಾಜದ ಹೆಸರನ್ನು ಅಸಂವಿಧಾನಿಕವಾಗಿ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದನ್ನು ರದ್ದು ಪಡಿಸಿ, ನ್ಯಾಯಾಲಯದ ಆದೇಶ ಜಾರಿಗೊಳಿಸಿ ಮೊಗೇರ ಸಮಾಜಕ್ಕೆ ಸಿಂಧುತ್ವ ಪ್ರಮಾಣಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮೊಗೇರ ಸಮಾಜದ ಪ್ರಮುಖರಾದ ನಾರಾಯಣ ದೈಮನೆ, ನಾಗಪ್ಪ ಮೊಗೇರ್, ಪುಂಡಲೀಕ ಹೆಬಳೆ, ರಾಮ ಮೊಗೇರ್, ಭಾಸ್ಕರ ದೈಮನೆ ಸೇರಿದಂತೆ, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News