ಹತ್ತೇ ನಿಮಿಷದಲ್ಲಿ ವೆಬ್ ಸೈಟ್ ಹ್ಯಾಕ್ ಮಾಡಿದ 11ರ ಪೋರ

Update: 2018-08-14 11:49 GMT

ಫ್ಲಾರಿಡಾ,ಆ.14 : ಕಳೆದ ವಾರಾಂತ್ಯದಲ್ಲಿ ನಡೆದ  ಮೂರು ದಿನಗಳ  ಡೆಫ್ ಕಾನ್ ಹ್ಯಾಕರ್ಸ್  ಸಮಾವೇಶದಲ್ಲಿ 11 ವರ್ಷದ ಬಾಲಕನೊಬ್ಬ ಕೇವಲ ಹತ್ತೇ ನಿಮಿಷಗಳಲ್ಲಿ  ಫ್ಲಾರಿಡಾ ಚುನಾವಣಾ ಫಲಿತಾಂಶ ವೆಬ್ ಸೈಟ್ ನ ಪ್ರತಿರೂಪ ಹೊಂದಿದ ವೆಬ್ ತಾಣವನ್ನು ಹ್ಯಾಕ್ ಮಾಡಿದ್ದಾನೆ. ಟ್ಯಾಲಿಗಳ ಹೆಸರುಗಳನ್ನೂ ಬದಲಾಯಿಸಿ ಆತ ಎಲ್ಲರಿಗೂ  ಅಚ್ಚರಿ ಹುಟ್ಟಿಸಿದ್ದಾನೆ. ಆದರೆ ಈ ಬೆಳವಣಿಗೆ  ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ  ಡಾಟಾ ಸೆಕ್ಯುರಿಟಿಯ ಬಗ್ಗೆ ಆತಂಕಕ್ಕೂ ಕಾರಣವಾಗಿದೆ.
ಸಮಾವೇಶದಲ್ಲಿ ಭಾಗವಹಿಸಿದ್ದ ಆರರಿಂದ 17 ವರ್ಷ ವಯೋಮಿತಿಯ 35 ಮಕ್ಕಳ ಪೈಕಿ ಎಮ್ಮೆಟ್ ಬ್ರುವರ್  ಎಂಬ ಹೆಸರಿನ ಈ ಬಾಲಕ ಅತ್ಯಂತ ವೇಗವಾಗಿ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದು  ಉಳಿದ ಮಕ್ಕಳೂ ನಂತರ  ಚುನಾವಣೆ ನಡೆಯಲಿರುವ ಆರು ರಾಜ್ಯಗಳ ಫಲಿತಾಂಶ ವೆಬ್ ಸೈಟ್ ಗಳ ಪ್ರತಿಕೃತಿ ವೆಬ್ ಸೈಟ್ ಗಳನ್ನು  ಹ್ಯಾಕ್ ಮಾಡಿದ್ದಾರೆ.

ಅಮೆರಿಕಾದ ಚುನಾವಣೆ ಸಂಬಂಧಿತ ಸವಲತ್ತುಗಳು ಹಾಗೂ ವ್ಯವಸ್ಥೆ ಎಷ್ಟು ಪ್ರಬಲವಾಗಿದೆ ಎಂದು ತಿಳಿಯಲು ಈ ಸಮಾವೇಶ ಆಯೋಜಿಸಲಾಗಿತ್ತು,.
ಸಮಾವೇಶದಲ್ಲಿ ಭಾಗವಹಿಸಿದವರು ಅಭ್ಯರ್ಥಿಗಳ ಹೆಸರುಗಳನ್ನು `ಬಾಬ್ ದಿ ಬಿಲ್ಡರ್,' `ರಿಚರ್ಡ್ ನಿಕ್ಸನ್ಸ್ ಹೆಡ್' ಎಂದೂ ಬದಲಾಯಿಸಿದ್ದರು. ವಿಜೇತ ಬಾಲಕ ಬ್ರುವೆಟ್,  ಟೆಕ್ಸಾಸ್ ನ ಆಸ್ಟಿನ್ ನಿವಾಸಿಯಾಗಿದ್ದು ಆತ  ಫ್ಲೋರಿಡಾ ವೆಬ್ ಸೈಟ್ ನಂತಹುದೇ ವೆಬ್ ಸೈಟ್ ನ ವಿಜೇತ ಅಭ್ಯರ್ಥಿಯ ಹೆಸರನ್ನು ತನ್ನ ಹೆಸರಿಗೆ ಬದಲಾಯಿಸಿದ್ದೇ ಅಲ್ಲದೆ ಲಕ್ಷಗಟ್ಟಲೆ ಮತ ದೊರೆಯುವಂತೆ ಮಾಡಿದ್ದ. 

ಸಮಾವೇಶದ ಫಲಿತಾಂಶವನ್ನು ಸ್ವಾಗತಿಸಿದ ನ್ಯಾಷನಲ್ ಅಸೋಸಿಯೇಶನ್ ಆಫ್ ಸೆಕ್ರಟರೀಸ್ ಆಫ್ ಸ್ಟೇಟ್ಸ್ ಅದೇ ಸಮಯ  ಸದ್ಯ ಇರುವ ವ್ಯವಸ್ಥೆಗಳಿಗೆ ಹೆಚ್ಚುವರಿ ಸುರಕ್ಷತಾ ವಿಧಾನಗಳಿರುವುದರಿಂದ ಅವುಗಳನ್ನು ಅಷ್ಟು ಸುಲಭವಾಗಿ ಹ್ಯಾಕ್ ಮಾಡುವುದು ಅಸಾಧ್ಯ ಎಂದು ಅಭಿಪ್ರಾಯ ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News