ಎನ್ನಾರೈಗಳಿಂದ ಆಸ್ತಿ ಖರೀದಿಸುವಾಗ ಈ ಮುಖ್ಯ ವಿಷಯವನ್ನು ಮರೆಯಬೇಡಿ

Update: 2018-08-14 12:11 GMT

ಅನಿವಾಸಿ ಭಾರತೀಯ(ಎನ್ನಾರೈ)ರಿಂದ ಆಸ್ತಿಗಳನ್ನು ಖರೀದಿಸಿದ ವ್ಯಕ್ತಿಗಳು ಹಲವಾರು ತೆರಿಗೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡ ಹಲವಾರು ನಿದರ್ಶನಗಳಿವೆ. ಆಸ್ತಿಯನ್ನು ಖರೀದಿಸುವಾಗ ಆದಾಯ ತೆರಿಗೆ ಕಾಯ್ದೆಯನ್ವಯ ಆತ ನಿವಾಸಿ ಭಾರತೀಯನೇ ಅಥವಾ ಅನಿವಾಸಿ ಭಾರತೀಯನೇ ಎನ್ನುವುದನ್ನು ತಿಳಿದುಕೊಳ್ಳುವುದು ಆರಂಭಿಕ ಸಮಸ್ಯೆಯಾಗಿದೆ. ಆಸ್ತಿ ಖರೀದಿಸುವಾಗ ಈ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಮಾರಾಟಗಾರ ನಿವಾಸಿ ಭಾರತೀಯನಾಗಿದ್ದರೆ ಮೂಲದಲ್ಲಿ ಶೇ.1ರಷ್ಟು ತೆರಿಗೆ ಕಡಿತ ಸಾಕಾಗುತ್ತದೆ. ಆದರೆ ಮಾರಾಟಗಾರ ಎನ್ನಾರೈ ಆಗಿದ್ದರೆ ಶೇ.20(ಕೆಲವು ಪ್ರಕರಣಗಳಲ್ಲಿ ಇನ್ನೂ ಹೆಚ್ಚು)ರಷ್ಟು ತೆರಿಗೆಯನ್ನು ಮುರಿದುಕೊಳ್ಳುವುದು ಅಗತ್ಯವಾಗುತ್ತದೆ. ತಪ್ಪು ತೆರಿಗೆ ಕಡಿತವಾಗಿದ್ದರೆ ದಂಡಗಳು ಅನ್ವಯವಾಗುತ್ತವೆ ಮತ್ತು ಖರೀದಿದಾರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ಆದಾಯ ತೆರಿಗೆ ಕಾಯ್ದೆಯ 194-1ಎ ಸೆಕ್ಷನ್‌ನಂತೆ ಆಸ್ತಿಯ ಮಾರಾಟಗಾರ ನಿವಾಸಿ ಭಾರತೀಯನಾಗಿದ್ದರೆ ಮಾರಾಟದ ವೌಲ್ಯವು 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್)ದ ಬಾಧ್ಯತೆ ಅನ್ವಯವಾಗುತ್ತದೆ. 195 ಸೆಕ್ಷನ್‌ನಂತೆ ಎನ್ನಾರೈ ವ್ಯಕ್ತಿಯಿಂದ ಆಸ್ತಿಯನ್ನು ಖರೀದಿಸಿದರೆ ವೌಲ್ಯ ಏನೇ ಆಗಿದ್ದರೂ ಎಲ್ಲ ಪ್ರಕರಣಗಳಲ್ಲಿ ಟಿಡಿಎಸ್ ಬಾಧ್ಯತೆ ಖರೀದಿದಾರನ ಹೆಗಲೇರುತ್ತದೆ.

ಮಾರಾಟಗಾರ ಎನ್ನಾರೈ ಎಂದು ನಿರ್ಣಯಿಸುವುದು ಹೇಗೆ?

ಸಾಮಾನ್ಯ ಖರೀದಿದಾರರು ಹೆಚ್ಚಿನ ಸಂದರ್ಭಗಳಲ್ಲಿ ತೆರಿಗೆ ನಿಯಮಗಳಂತೆ ಮಾರಾಟಗಾರನ ನಿವಾಸಿ ಸ್ಥಾನಮಾನ ಮತ್ತು ರಾಷ್ಟ್ರೀಯತೆಯ ನಡುವೆ ಗೊಂದಲವನ್ನು ಮಾಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಎನ್ನಾರೈ ವ್ಯಕ್ತಿ ಆಸ್ತಿಯಿರುವ ಸ್ಥಳದಲ್ಲಿ ವಾಸವಾಗಿರುವುದಿಲ್ಲ. ಆಸಕ್ತ ಖರೀದಿದಾರನೊಂದಿಗೆ ಸಂವಹನವು ಹೆಚ್ಚಾಗಿ ಇ-ಮೇಲ್ ಅಥವಾ ದೂರವಾಣಿಯ ಮೂಲಕ ನಡೆಯುತ್ತದೆ. ಕೆಲವು ಪ್ರಕರಣಗಳಲ್ಲಿ ಮಾರಾಟಗಾರ ಪಾನ್ ಕಾರ್ಡ್ ಅಥವಾ ಆಧಾರ ಕಾರ್ಡ್‌ನೊಂದಿಗೆ ದಾಖಲೆಗಳನ್ನು ಕಳುಹಿಸಬಹುದು. ಈ ಕಾರ್ಡ್‌ಗಳು ಸಾಮಾನ್ಯ ಖರೀದಿದಾರನನ್ನು ದಾರಿ ತಪ್ಪಿಸುತ್ತವೆ. ಇಲ್ಲದಿದ್ದರೂ ಮಾರಾಟಗಾರ ಸ್ಪಷ್ಟವಾಗಿ ಬಹಿರಂಗಗೊಳಿಸದಿದ್ದರೆ ಆತನ ನಿವಾಸಿ ಸ್ಥಾನಮಾನವನ್ನು ನಿರ್ಧರಿಸುವುದು ಕಷ್ಟವಾಗುತ್ತದೆ.

ಸಮಸ್ಯೆಯನ್ನು ಆರಂಭದಲ್ಲಿಯೇ ಬಗೆಹರಿಸಿಕೊಳ್ಳಬೇಕಿದ್ದರೆ ಮಾರಾಟಗಾರ ಅನಿವಾಸಿ ವ್ಯಕ್ತಿಯಾಗಿದ್ದಾನೆಯೇ ಎಂದು ಆತನನ್ನು ನೇರವಾಗಿ ಪ್ರಶ್ನಿಸುವುದು ಮೊದಲ ಹೆಜ್ಜೆಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಕೆದಕಲು ಮತ್ತು ಆತ ಸುಸಂಗತ ಅವಧಿಯಲ್ಲಿ ಎಷ್ಟು ದಿನ ಭಾರತದಲ್ಲಿ ವಾಸವಾಗಿದ್ದಾನೆ ಎನ್ನುವುನ್ನು ತಿಳಿದುಕೊಳ್ಳಲು ಆತನ ಆದಾಯ ತೆರಿಗೆ ರಿಟರ್ನ್‌ಗಳು ಅಥವಾ ಪಾಸ್‌ಪೋರ್ಟ್ ವಿವರಗಳನ್ನು ಪಡೆದುಕೊಳ್ಳಬೇಕು. ಈ ವಿವರಗಳನ್ನು ಹಂಚಿಕೊಳ್ಳಲು ಸಂಭಾವ್ಯ ಮಾರಾಟಗಾರ ಹಿಂಜರಿಯಬಹುದಾದ್ದರಿಂದ ಆತ ಭಾರತದಲ್ಲಿ ತೆರಿಗೆ ನಿವಾಸಿಯಾಗಿದ್ದಾನೆ ಎನ್ನುವುದಕ್ಕೆ ಆತನ ಲೆಕ್ಕ ಪರಿಶೋಧಕರಿಂದ ಪ್ರಮಾಣಪತ್ರವನ್ನು ಒದಗಿಸುವಂತೆ ಖರೀದಿದಾರ ಕೇಳಿಕೊಳ್ಳಬಹುದು. ಮಾರಾಟಗಾರ ನಿವಾಸಿಯಾಗಿದ್ದಾನೆ ಎಂಬ ಲಿಖಿತ ಮುಚ್ಚಳಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಮತ್ತು ಇದು ಮಾರಾಟ ಒಪ್ಪಂದದ ಭಾಗ ಅಥವಾ ಪ್ರತ್ಯೇಕ ದಾಖಲೆ ಆಗಿರಬಹುದು. ಆದರೂ ಇಂತಹ ಘೋಷಣೆ ಸಂಪೂರ್ಣ ರಕ್ಷಣೆಯನ್ನು ನೀಡುವುದಿಲ್ಲ. ಮಾರಾಟಗಾರ ಬೇರೊಬ್ಬ ವ್ಯಕ್ತಿಗೆ ಪವರ್ ಆಫ್ ಅಟಾರ್ನಿಯನ್ನು ನೀಡಿದ್ದರೆ ಆತ ಎನ್ನಾರೈ ಆಗಿರುವ ಸಾಧ್ಯತೆಯಿರುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯವಾಗುತ್ತದೆ.

 ಆದಾಯ ತೆರಿಗೆ ಕಾಯ್ದೆಯಡಿ ವ್ಯಕ್ತಿಯ ತೆರಿಗೆ ನಿವಾಸಿ ಸ್ಥಾನಮಾನವು ಹಾಲಿ ಹಣಕಾಸು ವರ್ಷದಲ್ಲಿ ಮತ್ತು ಹಿಂದಿನ ನಾಲ್ಕು ಹಣಕಾಸು ವರ್ಷಗಳಲ್ಲಿ ಆತ ಭಾರತದಲ್ಲಿ ಕಳೆದಿರುವ ದಿನಗಳ ಸಂಖ್ಯೆಯನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ. ಹೀಗಾಗಿ ಈ ಅವಧಿಯನ್ನೊಳಗೊಂಡ ಪಾಸ್‌ಪೋರ್ಟ್ ಪ್ರತಿಗಳಂತಹ ಮಾರಾಟಗಾರನ ಭಾರತದಲ್ಲಿ ವಾಸ್ತವ್ಯದ ವಿವರಗಳನ್ನು ಖರೀದಿದಾರನು ಪಡೆದುಕೊಳ್ಳಬೇಕಾಗುತ್ತದೆ.

 ಆದರೆ ಹಣಕಾಸು ವರ್ಷದ ಮೊದಲಿನ ಅವಧಿಯಲ್ಲಿ ವಹಿವಾಟು ನಡೆದಿದ್ದರೆ ನಿವಾಸಿ ಸ್ಥಾನಮಾನವನ್ನು ಹೀಗೇ ಎಂದು ಖಚಿತಪಡಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಖರೀದಿದಾರ ತೆರಿಗೆ ಬಾಧ್ಯತೆಯ ಬಾಕಿಯೇನಾದರೂ ಇದ್ದರೆ ಅದರಿಂದ ಉದ್ಭವಗೊಳ್ಳುವ ವಿವಾದಗಳಿಂದ ತನ್ನ ಹಿತಾಸಕ್ತಿಯ ರಕ್ಷಣೆಗಾಗಿ ಒಪ್ಪಂದ ಅಥವಾ ಕ್ರಯಪತ್ರವನ್ನು ವಕೀಲರಿಂದ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News