ದಿಲ್ಲಿಯಲ್ಲಿ ಕಾರ್ ಧ್ವಂಸ: ಹತ್ತು ಕನ್ವರ್ ಯಾತ್ರಾರ್ಥಿಗಳ ಬಂಧನ

Update: 2018-08-14 16:48 GMT

ಹೊಸದಿಲ್ಲಿ, ಆ.14: ತಮ್ಮ ಗೆಳೆಯನಿಗೆ ತಾಗಿಕೊಂಡು ಹೋಯಿತು ಎಂಬ ಕಾರಣಕ್ಕೆ ಕಾರೊಂದನ್ನು ಪುಡಿಗೈದ ಹತ್ತು ಕನ್ವರ್ ಯಾತ್ರಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಕಳೆದ ವಾರ ಪಶ್ಚಿಮ ದಿಲ್ಲಿಯ ಮೋತಿ ನಗರ್‌ನಲ್ಲಿ ಆಗಸ್ಟ್ ಏಳರಂದು ನಡೆದಿತ್ತು. ಸೋಮವಾರ ಪೊಲೀಸರು ಕಾರು ಧ್ವಂಸಗೊಳಿಸಿದ ತಂಡದಲ್ಲಿದ್ದ ಯೋಗೇಶ್ ಎಂಬಾತನನ್ನು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳು ಮತ್ತು ಒಂಬತ್ತು ಕನ್ವರ್ ಶಿಬಿರಗಳ ನೋಂದಣಿಗಳನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಪೊಲೀಸರು 22ರ ಹರೆಯದ ಯೋಗೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಗೇಶ್ ನೀಡಿದ ಮಾಹಿತಿಯಂತೆ ಕೃತ್ಯದ ಪ್ರಮುಖ ಆರೋಪಿ ಅಮನ್ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮನ್ ನಡೆದುಕೊಂಡು ಹೋಗುತ್ತಿದ್ದ ವೇಳೆ ಆತನಿಗೆ ಕಾರು ತಾಗಿಕೊಂಡು ಹೋಗಿತ್ತು. ಪರಿಣಾಮವಾಗಿ ಆತನ ಕೈಯಲ್ಲಿದ್ದ ಪವಿತ್ರ ಜಲ ನೆಲಕ್ಕೆ ಬಿದ್ದಿತ್ತು. ಇದರಿಂದ ಕುಪಿತಗೊಂಡ ಅಮನ್ ಹಾಗೂ ಆತನ ಸ್ನೇಹಿತರು ಕಾರನ್ನು ಪುಡಿಗೈದಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ರಾಹುಲ್ ಬಿಲ್ಲ ಎಂಬಾತನನ್ನು ಆಗಸ್ಟ್ 9ರಂದು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News