ಮೇ.ಆದಿತ್ಯಕುಮಾರ್, ರೈಫಲ್‌ಮನ್ ಔರಂಗಜೇಬ್‌ಗೆ ಶೌರ್ಯಚಕ್ರ ಪುರಸ್ಕಾರ

Update: 2018-08-14 17:12 GMT

ಹೊಸದಿಲ್ಲಿ,ಆ.14: ಕಳೆದ ಜನವರಿಯಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಕಲ್ಲು ತೂರಾಟಗಾರರ ಗುಂಪಿನ ಮೇಲೆ ಸೇನೆಯ ಗುಂಡು ಹಾರಾಟದಿಂದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದದ ಸುಳಿಯಲ್ಲಿ ಸಿಲುಕಿದ್ದ ಮೇಜರ್ ಆದಿತ್ಯ ಕುಮಾರ್ ಸೇರಿದಂತೆ 20 ಸಶಸ್ತ್ರಪಡೆಗಳ ಸಿಬ್ಬಂದಿಗಳಿಗೆ ಶೌರ್ಯಚಕ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕಳೆದ ಜೂನ್‌ನಲ್ಲಿ ಈದ್‌ಗಾಗಿ ಮನೆಗೆ ಮರಳುತ್ತಿದ್ದಾಗ ಪುಲ್ವಾಮಾದಲ್ಲಿ ಭಯೋತ್ಪಾದಕರಿಂದ ಬರ್ಬರವಾಗಿ ಹತ್ಯೆಯಾಗಿದ್ದ ಜಮ್ಮು-ಕಾಶ್ಮೀರದ ನಿವಾಸಿ,ರೈಫಲ್‌ಮನ್ ಔರಂಗಜೇಬ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ರಕ್ಷಣಾ ಸಚಿವಾಲಯವು ಮಂಗಳವಾರ ಸಂಜೆ ಶೌರ್ಯಚಕ್ರ ವಿಜೇತರ ಅಧಿಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿತು.

  ಜ.27ರಂದು ಶೋಪಿಯಾನ್‌ನಲ್ಲಿ ಮೇಜರ್ ಆದಿತ್ಯ ನೇತೃತ್ವದ ಸೇನಾ ತುಕುಡಿಯು ಕಲ್ಲು ತೂರಾಟಗಾರರ ಗುಂಪಿನ ಮೇಲೆ ಗುಂಡುಗಳನ್ನು ಹಾರಿಸಿದ್ದು, ಜಮ್ಮು-ಕಾಶ್ಮೀರ ಪೊಲೀಸರು ಘಟನೆಯಲ್ಲಿ ಭಾಗಿಯಾದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮೇ.ಆದಿತ್ಯರ ತಂದೆ ಫೆಬ್ರವರಿಯಲ್ಲಿ ಸರ್ವೋಚ್ಚ ನ್ಯಾಯಲಯದ ಮೆಟ್ಟಿಲನ್ನೇರಿದ್ದರು. ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಅಫ್‌ಸ್ಪಾ) ಜಾರಿಯಲ್ಲಿರುವುದರಿಂದ ರಾಜ್ಯ ಸರಕಾರವು ಕರ್ತವ್ಯನಿರತ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ಸಲ್ಲಿಸುವಂತಿಲ್ಲ ಎಂದು ಕೇಂದ್ರವು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ತಿಳಿಸಿತು.

 44 ರಾಷ್ಟ್ರೀಯ ರೈಫಲ್ಸ್‌ನಲ್ಲಿ ರೈಫಲ್‌ಮನ್ ಆಗಿದ್ದ ಔರಂಗಜೇಬ್ ಅವರು ಜೂ.14ರಂದು ಈದ್ ಆಚರಣೆಗಾಗಿ ಮನೆಗೆ ಮರಳುತ್ತಿದ್ದಾಗ ಪುಲ್ವಾಮಾದಲ್ಲಿ ಭಯೋತ್ಪಾದಕರು ಅವರನ್ನು ಅಪಹರಿಸಿದ್ದರು. ಗಂಟೆಗಳ ನಂತರ ಗುಂಡುಗಳಿಂದ ಛಿದ್ರಗೊಂಡಿದ್ದ ಅವರ ಶವವು ಸುಮಾರು 10 ಕಿ.ಮೀ. ದೂರದ ಗುಸ್ಸು ಗಾಮದಲ್ಲಿ ಪತ್ತೆಯಾಗಿತ್ತು ಅವರ ಹತ್ಯೆಯು ಕಾಶ್ಮೀರದಲ್ಲಿ ವ್ಯಾಪಕ ಆಕ್ರೋಶವನ್ನುಂಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News