ಉಳ್ಳಾಲ : ಹಣದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ
Update: 2018-08-14 23:14 IST
ಉಳ್ಳಾಲ, ಆ. 14 : ಪ್ರಯಾಣಿಕರೊಬ್ಬರು ಅಟೋ ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ನಗದು ಇದ್ದ ಬ್ಯಾಗೊಂದನ್ನು ರಿಕ್ಷಾ ಚಾಲಕರೊಬ್ಬರು ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಡಿನೋವಿನ ಚಿಕಿತ್ಸೆಗೆ ಕೇರಳದ ಕಣ್ಣೂರಿನಿಂದ ಯೆನೆಪೊಯ ಆಸ್ಪತ್ರೆಗೆ ಬಂದಿದ್ದ ಶಮೀರ್ ಅವರು ಮಂಗಳವಾರ ಬೆಳಗ್ಗೆ ಕಂಕನಾಡಿಯಲ್ಲಿ ರೈಲಿನಿಂದ ಇಳಿದು ವಸಂತ ಶೆಟ್ಟಿ ಎಂಬವರಿಗೆ ಸೇರಿದ ಅಟೋ ಏರಿದ್ದರು. ಆಸ್ಪತ್ರೆ ಬಳಿ ಇಳಿದಾಗ ತಾವು ತಂದಿದ್ದ 1,10,000 ರೂ. ನಗದು ಹೊಂದಿದ್ದ ಬ್ಯಾಗ್ ಅಟೋದಲ್ಲೇ ಬಿಟ್ಟು ಹೋಗಿದ್ದಾರೆ.
ಇದರಿಂದ ಕಂಗಾಲಾದ ಶಮೀರ್ ಅವರು ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದರು. ಈ ನಡುವೆ ಅಟೋದಲ್ಲಿ ಬ್ಯಾಗ್ ಇರುವುದನ್ನು ಮಂಗಳೂರಿನಲ್ಲಿ ಗಮನಿಸಿದ ವಸಂತ ಶೆಟ್ಟಿ ಅವರು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿ, ಸಂಜೆ ವೇಳೆ ಠಾಣೆಗೆ ತೆರಳಿ ಬ್ಯಾಗ್ ಪೊಲೀಸರ ಸಮ್ಮುಖದಲ್ಲಿ ಶಮೀರ್ ಅವರಿಗೆ ನೀಡಿದರು. ಇದರಿಂದ ಶಮೀರ್ ಅವರು ವಸಂತ ಶೆಟ್ಟಿಯವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದರು.