×
Ad

ಕಾಪು ಬಂಗ್ಲೆ ಮೈದಾನದಲ್ಲಿ ಮಿನಿವಿಧಾನ ಸೌಧಕ್ಕೆ ಮನವಿ : ಲಾಲಾಜಿ

Update: 2018-08-14 23:16 IST

ಕಾಪು, ಆ. 14: ಕಾಪು ತಾಲೂಕಿಗೆ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಕಾರ್ಯಾಚರಿಸಲು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.

ಕಾಪು ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿರುವ ಪುರಸಭೆ ಕಟ್ಟಡದಲ್ಲಿ ಆರಂಭವಾದ ಕಾಪು ತಾಲ್ಲೂಕು ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಪುವಿನ ಪ್ರವಾಸಿ ಬಂಗ್ಲೆ ಆವರಣದಲ್ಲಿ ತಾಲ್ಲೂಕು ಕಚೇರಿ ವ್ಯಾಪ್ತಿಗೆ ಬರುವ 35 ಇಲಾಖೆಗಳಿಗೂ ಅನುಕೂಲವಾಗುವಂತೆ ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸಲು 5ಅಂತಸ್ತಿನ ಮಿನಿ ವಿಧಾನಸೌಧ ನಿರ್ಮಾಣವಾಗಬೇಕಾಗಿದೆ.

ಪುರಸಭೆ ಹಾಗೂ ತಾಲ್ಲೂಕು ಕಚೇರಿ ಜನರಿಗೆ ಅನುಕೂಲವಾಗುವಂತೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಪ್ರಥಮ ಹಂತವಾಗಿ ಕಂದಾಯ ಇಲಾಖೆಗೆ ಸಂಬಂದಿಸಿದ ತಾಲೂಕು ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿದೆ. ಮುಂದೆ ಹಂತ ಹಂತವಾಗಿ ವಿವಿಧ ಇಲಾಖೆಗಳು ಬರಲಿವೆ. ಉಪ ನೋಂದಣಾಧಿಕಾರಿ ಹಾಗೂ ಖಜಾನೆ ಕಚೇರಿಗಳು ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಕೇಂದ್ರ ಕಾಪು ತಾಲ್ಲೂಕಿನ ಮೈಲಿಗಲ್ಲು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದ ಕಚೇರಿ ಯಶಸ್ವಿಯಾಗಿ ಮುನ್ನಡೆಯಲಿ. ರಾಜ್ಯದಲ್ಲಿ ಕಾಪು ತಾಲ್ಲೂಕು ಮಾದರಿಯಾಗಲಿ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್ ಆಶಿಸಿದರು.

ಬುಧವಾರದಿಂದಲೇ ಕ್ರಯಪತ್ರ, ಮ್ಯುಟೇಶನ್ ಕೆಲಸಗಳು ಆರಂಭವಾಗಲಿದೆ. ಈಗಾಗಾಲೇ ಆರ್‌ಟಿಸಿಗಳಲ್ಲಿ ಕಾಪು ತಾಲೂಕಿನ ಹೆಸರು ಉಲ್ಲೇಖಿಸ ಲಾಗಿದೆ. ಕೆಲವೊಂದು ದಾಖಲೆಗಳಿಗೆ ಸಂಬಂಧಿಸಿದ ತಂತ್ರಾಂಶಗಳ ಕೆಲಸಗಳು ಬಾಕಿ ಉಳಿದಿದೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾಹಿತಿ ನೀಡಿದರು. ಪಡುಬಿದ್ರಿ ಸುಜ್ಲಾನ್ ಪುನರ್ವಸತಿ ಕೇಂದ್ರದ ಬಳಿ ವಾಸವಾಗಿದ್ದ ಕೊರಗ ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಪ್ರಾಕೃತಿಕ ವಿಕೋಪ ನಿಧಿಯಡಿ 5 ಜನರಿಗೆ ಪರಿಹಾರವನ್ನು ವಿತರಿಸಲಾಯಿತು.

ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ಪುರಸಭೆ ಅಧ್ಯಕ್ಷೆ ಮಾಲಿನಿ, ಮುಖ್ಯಾಧಿಕಾರಿ ರಾಯಪ್ಪ, ಕಾಪು ತಹಶೀಲ್ದಾರ್ ಗುರುಸಿದ್ದಯ್ಯ, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News