×
Ad

ಮಂಗಳೂರಿನಲ್ಲಿ ಮುಂದುವರಿದ ವರುಣನ ಆರ್ಭಟ: ಉಳ್ಳಾಲದಲ್ಲಿ ಐದು ಮನೆಗಳಿಗೆ ಹಾನಿ

Update: 2018-08-14 23:41 IST

ಮಂಗಳೂರು, ಆ.14: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮಂಗಳವಾರವೂ ಮುಂದುವರಿದಿದೆ. ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ಮದ ಹೊತ್ತಿನ ಮಳೆ ಬಿರುಸನ್ನು ಪಡೆದಿತ್ತು. ಸಂಜೆ ವೇಳೆ ವಿಶ್ರಾಂತಿ ಕೊಟ್ಟಿದ್ದ ಮಳೆ ಮತ್ತೆ ರಾತ್ರಯಾಗುತ್ತಿದ್ದಂತೆ ವರುಣನ ಆರ್ಭಟ ಹೆಚ್ಚಿದೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಸೋಮವಾರ ತಡರಾತ್ರಿ ಬೀಸಿದ ಭಾರೀ ಗಾಳಿ-ಮಳೆಗೆ ಉಳ್ಳಾಲದ ಅಳೇಕಲ ಮತ್ತು ಹಳೆಕೋಟೆ ಪ್ರದೇಶಗಳಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ.

ಉಳ್ಳಾಲ ಅಳೇಕಲದ ಕಕ್ಕೆತೋಟ ನಿವಾಸಿ ಎ.ಅಬ್ದುಲ್ ಖಾದರ್ ಎಂಬವರ ಮನೆಗೆ ಸಂಪೂರ್ಣ ಹಾನಿಯಾಗಿದೆ. ಉಳಿದಂತೆ ಜುಲೈಖಾ, ಭಾಗೀರಥಿ ಹಾಗೂ ಅಬ್ದುಲ್ ಖಾದರ್ ಎಂಬವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಳೇಕೋಟೆಯ ತಾಹಿರಾ ಎಂಬವರ ಮನೆಯೂ ಸಂಪೂರ್ಣ ಹಾನಿಯಾಗಿದೆ.
ಸೋಮವಾರ ತಡರಾತ್ರಿ ವೇಳೆ ಬೀಸಿದ ಭಾರೀ ಗಾಳಿಗೆ ಮರಗಳು ಉರುಳಿ ಬಿದ್ದು ಹಾನಿ ಸಂಭವಿಸಿದೆ. ಘಟನೆಯ ಮುನ್ಸೂಚನೆ ಅರಿತು ಮನೆಮಂದಿ ಹೊರ ಓಡಿ ಬಂದಿದ್ದರಿಂದ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಹಾಗೂ ಗ್ರಾಮಕರಣಿಕೆರು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ.

ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು-ಅಡಂಕುದ್ರು ಬಳಿಯ ಸುತ್ತ ನೇತ್ರಾವತಿ ನದಿ ನೀರು ನುಗ್ಗಿ ನೆರೆಯ ವಾತಾವರಣ ಸೃಷ್ಟಿಯಾಗಿದೆ.

ಸಂಚಾರ ಅಸ್ತವ್ಯಸ್ತ: ಮಂಗಳೂರು ನಗರದ ಕೆಪಿಟಿ-ಸರ್ಕ್ಯೂಟ್ ಹೌಸ್-ಬಂಟ್ಸ್ ಹಾಸ್ಟೇಲ್ ವರೆಗೆ ರಾತ್ರಿ ಹೇವಿ ಟ್ರಾಫಿಕ್ ಉಟಾಗಿ ವಾಹನಗಳ ಸಂಚಾರದಲ್ಲಿ ಕಂಡುಬಂದಿತು. ಕೂಳೂರು ಸೇತುವೆಯ ರಸ್ತೆ ಸರಿಯಿಲ್ಲದ್ದರಿಂದ ವಾಹನಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ರಸ್ತೆ ಬ್ಲಾಕ್ ಆಗಿದ್ದು, ವಾಹನಗಳ ತುಂಬ ನಿಧಾನವಾಗಿ ಚಲಿಸುತ್ತಿದ್ದವು. ಇದರಿಂದ ಪಾದಚಾರಿಗಳು ಸಂಕಷ್ಟಕ್ಕೀಡಾಗಿದ್ದರು.

ಪ್ರವಾಹ ಭೀತಿ: ನೇತ್ರಾವತಿ, ಕುಮಾರಧಾರಾ ನದಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ನೇತ್ರಾವತಿ ನದಿ ನೀರಿನ ಮಟ್ಟವು ಬಂಟ್ವಾಳದಲ್ಲಿ 8.8 ಮೀಟರ್ ಎತ್ತರವಿದ್ದರೆ, ಉಪ್ಪಿನಂಗಡಿಯಲ್ಲಿ 25 ಮೀಟರ್ ಇದ್ದು, 29.5 ಮೀಟರ್ ಅಪಾಯದ ಮಟ್ಟವಾಗಿದೆ. ಕುಮಾರಧಾರಾ ನದಿ ನೀರಿನ ಮಟ್ಟವು ಉಪ್ಪಿನಂಗಡಿ ಭಾಗದಲ್ಲಿ 25 ಮೀಟರ್ ಇದ್ದು, 28.5 ಮೀಟರ್ ಅಪಾಯದ ಮಟ್ಟವಾಗಿದೆ. ನದಿಗಳಲ್ಲಿ ಹೆಚ್ಚಿದ ನೀರಿನ ಹರಿವು ಪ್ರಮಾಣದದಿಂದಾಗಿ ಸಾರ್ವಜನಿಕರಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ರಾಜಕಾಲುವೆ ಒತ್ತುವರಿ: ಅಂತಿಮವಾಗದ ವರದಿ !

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡು ನದಿ ನೀರಿನ ಮಟ್ಟ ಏರಿಕೆಯಿಂದ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೇ 29ರಂದು ಸುರಿದ ಅಕಾಲಿಕ ಮಳೆಯಿಂದ ಸಂಭವಿಸಿದ ಅನಾಹುತಗಳನ್ನು ಮತ್ತೆ ನೆನಪಿಸಿದೆ. ಅಂದು ಸುರಿದ ಅಕಾಲಿಕ ಮಳೆಯಿಂದಾಗಿ ಮಂಗಳೂರು ನಗರ ನಲುಗಿ ಹೋಗಿತ್ತು. ಈ ಸಂದರ್ಭ ನಗರದ ರಾಜಕಾಲುವೆಗಳ ಅತಿಕ್ರಮಣ, ಒತ್ತುವರಿ ಪತ್ತೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಮೂಡಾ ಆಯುಕ್ತರ ನೇತೃತ್ವದ ತಂಡಕ್ಕೆ ಆದೇಶ ನೀಡಿದ್ದರು.

ಇದೀಗ ಆ ಆದೇಶಕ್ಕೆ ಎರಡು ತಿಂಗಳಾಗಿದ್ದರೂ ಅಂತಿಮ ವರದಿ ಮಾತ್ರ ಇನ್ನೂ ಬಂದಿಲ್ಲ. ಮಂಗಳೂರಿನಲ್ಲಿ ಅಂದು ಸುರಿದ ಭಾರೀ ಮಳೆಯಿಂದ ನಗರದ ಕೊಟ್ಟಾರ ಸೇರಿದಂತೆ ಬಹುತೇಕ ಭಾಗದಲ್ಲಿ ನೆರೆನೀರು ರಸ್ತೆಯಲ್ಲಿಯೇ ಹರಿದು ಸಮಸ್ಯೆ ಸೃಷ್ಟಿಯಾಗಿತ್ತು. ಪರಿಣಾಮವಾಗಿ ಕೋಟ್ಯಾಂತರ ರೂ.ನಷ್ಟ ಉಂಟಾಗಿತ್ತು. ನಗರದ ಈ ಪರಿಸ್ಥಿತಿಗೆ ರಾಜಕಾಲುವೆಗಳ ಅತಿಕ್ರಮಣ ಪ್ರಮುಖ ಕಾರಣ ಎಂದು ಅರಿತ ಜಿಲ್ಲಾಧಿಕಾರಿಯವರು ರಾಜಕಾಲುವೆಗಳ ಒತ್ತುವರಿ ಪತ್ತೆಗೆ ವಿಶೇಷ ಸಮಿತಿ ರಚಿಸಿ ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಆದರೆ ಸಮಗ್ರ ಅಧ್ಯಯನ ನಡೆಸಬೇಕಾದ ಕಾರಣ ಜೂ.5ರಂದು 27ಪುಟಗಳ ಮಧ್ಯಂತರ ವರದಿ ಸಲ್ಲಿಕೆ ಮಾಡಿ, ಹೆಚ್ಚುವರಿ ಅವಧಿಯನ್ನು ಸಮಿತಿ ಕೇಳಿತ್ತು.

ಇದೀಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಕಾಂತ್ ಅವರ ನೇತೃತ್ವದಲ್ಲಿ 4ಮಂದಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಸಮಗ್ರ ವರದಿ ತಯಾರಿಸಲಾಗುತ್ತಿದೆ. ಇದಕ್ಕಾಗಿ 4ಮಂದಿ ಸಿಟಿ ಸರ್ವೇಯರ್‌ಗಳನ್ನು ಪಡೆದುಕೊಳ್ಳಲಾಗಿದೆ. ಎನ್‌ಐಟಿಕೆ ತಂತ್ರಜ್ಞರ ನೆರವನ್ನೂ ಪಡೆಯಲಾಗಿದೆ. ಬೆಂಗಳೂರಿನಿಂದ ಟೊಪೋಗ್ರಫಿ ನಕ್ಷೆ ತರಿಸಿ ಎನ್‌ಐಟಿಕೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ನಕ್ಷೆಯ ಆಧಾರದಲ್ಲಿ ನಗರದ ರಾಜಕಾಲುವೆಗಳ ಮಾಹಿತಿ ಕಲೆ ಹಾಕಿ ಒತ್ತುವರಿ ಪ್ರದೇಶದ ಸಮಗ್ರ ವರದಿ ಸಿದ್ಧಪಡಿಸಿ ವರದಿಯನ್ನು ಸಲ್ಲಿಸಬೇಕಾಗಿದೆ. ಆದರೆ ಅಂತಿಮ ವರದಿ ಅದ್ಯಾವಾಗ ಸಲ್ಲಿಕೆಯಾಗುತ್ತದೆ ಎಂಬುದು ಮಾತ್ರ ಇನ್ನೂ ತಿಳಿದಿಲ್ಲ.

ಭಾರೀ ಮಳೆ: ಮೀನುಗಾರರಿಗೆ ಎಚ್ಚರಿಕೆ

 ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ನಿರಂತರ ಮಳೆಯಾಗುವ ಸಂಭವವಿದೆ. ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳದಂತೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನದಿ ಪಾತ್ರ, ತಗ್ಗು ಪ್ರದೇಶಕ್ಕೆ ಮಕ್ಕಳು ತೆರಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 24್ಡ7 ಕಂಟ್ರೋಲ್ ರೂಂ ಸಂಖ್ಯೆ 1077ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News