×
Ad

ಪೆರಂಪಳ್ಳಿಯ ದಲಿತ ಯುವಕ ಮೃತ್ಯು: ತನಿಖೆಗೆ ಒತ್ತಾಯಿಸಿ ಧರಣಿ

Update: 2018-08-15 19:43 IST

ಉಡುಪಿ, ಆ.15: ಪೆರಂಪಳ್ಳಿಯ ಗೇರುಕಟ್ಟೆಯ ದಲಿತ ಯುವಕ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಆರೋಪಿಸಿ ಸ್ಥಳೀಯರು ಇಂದು ಮೃತದೇಹವನ್ನು ಮನೆಯ ಮುಂದೆ ಇರಿಸಿ ಧರಣಿ ನಡೆಸಿದರು.

ಮೃತರನ್ನು ಗೇರುಕಟ್ಟೆಯ ನರ್ಸಿ ಹಾಗೂ ದಿ. ಗೋಪಾಲ ದಂಪತಿಯ ಪುತ್ರ ಭಾಸ್ಕರ್ (36) ಎಂದು ಗುರುತಿಸಲಾಗಿದೆ. ‘ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಭಾಸ್ಕರ್ ಎರಡು ದಿನಗಳ ಹಿಂದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಆಗ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಔಷಧ ನೀಡಿದ್ದರು. ನಿನ್ನೆ ಕಾಯಿಲೆ ಉಲ್ಬಣಗೊಂಡಿದ್ದು, ಕೂಡಲೇ ಭಾಸ್ಕರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಾಯಿತು’ ಎಂದು ಭಾಸ್ಕರ್ ಸಹೋದರ ನಾಗರಾಜ್ ತಿಳಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇಲ್ಲ ಎಂದು ಹೇಳಿ ವೈದ್ಯರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅದರಂತೆ ಮಧ್ಯಾಹ್ನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಯೂ ಐಸಿಯುನಲ್ಲಿ ಬೆಡ್ ಇಲ್ಲ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದರು. ಮತ್ತೆ ಮಂಗಳೂರಿನಿಂದ ಮಣಿಪಾಲ ಆಸ್ಪತ್ರೆಗೆ ರಾತ್ರಿ ಕರೆದುಕೊಂಡು ಬರುತ್ತಿದ್ದಾಗ ದಾರಿ ಮಧ್ಯೆ ಭಾಸ್ಕರ್ ಮೃತಪಟ್ಟರೆಂದು ಅವರು ದೂರಿದರು.

ಪರಿಹಾರ ನೀಡುವಂತೆ ಆಗ್ರಹ: ಮೃತ ಯುವಕನ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಯ ಅಂಬಲಪಾಡಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಮೃತ ದೇಹವನ್ನು ಮನೆಯ ಮುಂದೆ ಇಟ್ಟು ಧರಣಿ ನಡೆಸಿದರು.

‘ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಮುಂದೆ ಈ ರೀತಿ ಬಡವರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಬಡವರಿಗೆ ಅನುಕೂಲವಾಗುವಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿರುವಂತೆ ಎಲ್ಲ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಜಿಲ್ಲಾ ಆಸ್ಪತ್ರೆ ಯಲ್ಲೂ ಕಲ್ಪಿಸಬೇಕು. ಇದರಿಂದ ಈ ಸಾವಿಗೆ ನ್ಯಾಯ ಸಿಗಲು ಸಾಧ್ಯ ಮತ್ತು ಬಡವರ ಜೀವ ಉಳಿಯುತ್ತದೆ’ ಎಂದು ಉಮೇಶ್‌ ಕುಮಾರ್ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದ ಕಾರಣ ಈ ಸಾವು ಸಂಭವಿಸಿದೆ. ಅಲ್ಲದೆ ಆಸ್ಪತ್ರೆಯ ವೈದ್ಯರು ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯನ್ನು ಸಮೀಪದ ಮಣಿಪಾಲ ಆಸ್ಪತ್ರೆಗೆ ಕಳುಹಿಸುವ ಬದಲು ದೂರದ ಮಂಗಳೂರಿಗೆ ಕರೆದುಕೊಂಡು ಹೋಗಲು ಸೂಚಿಸಿದ ಪರಿಣಾಮ ಈ ಅನಾಹುತ ನಡೆದಿದೆ ಎಂದು ಅವರು ಆರೋಪಿಸಿದರು.

2 ವರ್ಷಗಳ ಅವಧಿಯಲ್ಲಿ ಎರಡನೆ ಸಾವು
ಮೃತ ಭಾಸ್ಕರ ಅವರ ಸಹೋದರ ಹರೀಶ್ (32) ಎಂಬವರು ಎರಡು ವರ್ಷಗಳ ಹಿಂದೆ ಇದೇ ರೀತಿಯ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದರೆಂದು ಮನೆಯವರು ದೂರಿದ್ದಾರೆ.

ಇದೀಗ ಭಾಸ್ಕರ್ ಅನಾರೋಗ್ಯಕ್ಕೆ ಒಳಗಾದ ಕೂಡಲೇ ಮತ್ತೆ ಆ ಸಮಸ್ಯೆ ಎದುರಾಗಬಾರದೆಂದು ಮನೆಯವರು ಸೂಕ್ತ ಚಿಕಿತ್ಸೆ ಒದಗಿಸುವಂತೆ ಆ.14ರಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು.

ಇದೀಗ ಎರಡು ವರ್ಷಗಳ ಅವಧಿ ಅದೇ ಮನೆಯಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಬಡ ಕುಟುಂಬಕ್ಕೆ ದಿಕ್ಕು ಕಾಣದಂತಾಗಿದೆ. ನರ್ಸಿಯವರ ಏಳು ಮಕ್ಕಳ ಪೈಕಿ ಈಗ ಮೂವರು ಮಾತ್ರ ಬದುಕಿದ್ದಾರೆ. ಪತಿ ಕೂಡ ಇಲ್ಲದ ನರ್ಸಿ ಸೋರುವ ಮನೆಯಲ್ಲಿ ವಾಸವಾಗಿದ್ದಾರೆ. ಈ ಬಡ ಕುಟುಂಬಕ್ಕೆ ಸರಕಾರ ಕೂಡಲೇ ಸರಿಯಾದ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News