ಕ್ರೊಯೇಶಿಯ ಸ್ಟ್ರೈಕರ್ ಮಾಂಡ್ಝುಕಿಕ್, ಗೋಲ್‌ಕೀಪರ್ ಸುಬಾಸಿಕ್ ನಿವೃತ್ತಿ

Update: 2018-08-15 14:24 GMT

ಝಗ್ರೆಬ್(ಕ್ರೊಯೇಶಿಯ), ಆ.15: ಕ್ರೊಯೇಶಿಯ ಸ್ಟ್ರೈಕರ್ ಮರಿಯೊ ಮಾಂಡ್ಝುಕಿಕ್ ಹಾಗೂ ಗೋಲ್‌ಕೀಪರ್ ಡೇನಿಯಲ್ ಸುಬಾಸಿಕ್ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ಒಂದೇ ದಿನ ನಿವೃತ್ತಿ ಘೋಷಿಸಿದ್ದಾರೆ.

 ಕ್ರೊಯೇಶಿಯ ತಂಡ ಮೊತ್ತ ಮೊದಲ ಬಾರಿ ಈ ವರ್ಷದ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದಾಗ ಈ ಇಬ್ಬರು ಆಟಗಾರರು ತಂಡದಲ್ಲಿದ್ದರು. ತಂಡದ ಐತಿಹಾಸಿಕ ಸಾಧನೆಗೆ ಬೆನ್ನೆಲುಬಾಗಿದ್ದರು.

33ರ ಹರೆಯದ ಸುಬಾಸಿಕ್ ನಿವೃತ್ತಿ ಘೋಷಿಸುವ ಮೂಲಕ ಡಿಫೆಂಡರ್ ವೆಡ್ರಾನ್ ಕೊರುಲುಕಾ ಹಾಗೂ ಮಾಂಡ್ಝುಕಿಕ್ ಹೆಜ್ಜೆಯನ್ನು ಅನುಸರಿಸಿದರು. 32ರ ಹರೆಯದ ಜುವೆಂಟಸ್ ಫಾರ್ವರ್ಡ್ ಆಟಗಾರ ಮಾಂಡ್ಝುಕಿಕ್ 2007ರಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ ಕ್ರೊಯೇಶಿಯ ಪರ ಆಡಿದ 89 ಪಂದ್ಯಗಳಲ್ಲಿ 33 ಗೋಲುಗಳನ್ನು ಗಳಿಸಿದ್ದಾರೆ. ಅಗ್ರ ಸ್ಕೋರರ್ ಡಾವೊರ್ ಸುಕೆರ್(35 ಗೋಲು)ಗಿಂತ ಎರಡು ಗೋಲು ಹಿಂದಿದ್ದಾರೆ.

ಜುಲೈನಲ್ಲಿ ರಶ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮೂರು ಗೋಲುಗಳನ್ನು ದಾಖಲಿಸಿದ್ದ ಮಾಂಡ್ಝುಕಿಕ್ ಕ್ರೊಯೇಶಿಯ ಫೈನಲ್‌ಗೆ ತಲುಪಲು ನೆರವಾಗಿದ್ದರು. ಆದರೆ, ಫೈನಲ್‌ನಲ್ಲಿ ಕ್ರೊಯೇಶಿಯ ತಂಡ ಫ್ರಾನ್ಸ್ ವಿರುದ್ಧ 2-4 ಅಂತರದಿಂದ ಸೋತಿತ್ತು.

 ‘‘ನಿವೃತ್ತಿಗೆ ಒಳ್ಳೆಯ ಕ್ಷಣ ಎಂಬುದಿಲ್ಲ. ಸಾಧ್ಯವಾದರೆ ಕ್ರೊಯೇಶಿಯದ ಪರ ಸಾಯುವ ತನಕವೂ ಆಡಬಹುದು. ನನ್ನ ಪಾಲಿಗೆ ನಿವೃತ್ತಿಯ ಸಮಯ ಬಂದಿದೆ. ಕ್ರೊಯೇಶಿಯ ತಂಡಕ್ಕಾಗಿ ಎಲ್ಲವನ್ನು ನೀಡಿದ್ದೇನೆ. ತಂಡದ ಯಶಸ್ಸಿನಲ್ಲಿ ನನ್ನ ಕೊಡುಗೆಯೂ ಇದೆ. ಇದೀಗ ನಾನು ತಂಡದ ಕಟ್ಟಾ ಅಭಿಮಾನಿಯಾಗಿ ಉಳಿಯುವೆ’’ ಎಂದು ಮಾಂಡ್ಝುಕಿಕ್ ಹೇಳಿದ್ದಾರೆ.

ಕ್ರೊಯೇಶಿಯ ಪರ ಎರಡು ವಿಶ್ವಕಪ್ ಟೂರ್ನಿಗಳನ್ನು ಆಡಿದ್ದ ಮಾಂಡ್ಝುಕಿಕ್ ಎರಡು ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದರು. 2012 ಹಾಗೂ 2013ರಲ್ಲಿ ಕ್ರೊಯೇಶಿಯ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು.

10 ವರ್ಷದ ವೃತ್ತಿಜೀವನಕ್ಕೆ ಸುಬಾಸಿಕ್ ವಿದಾಯ

ಇದೇ ವೇಳೆ, ಕ್ರೊಯೇಶಿಯ ಗೋಲ್‌ಕೀಪರ್ ಸುಬಾಸಿಕ್ ನಿವೃತ್ತಿ ಘೋಷಿಸಿದ್ದಾರೆ. ‘‘10 ವರ್ಷಗಳ ಕಾಲ ಕ್ರೊಯೇಶಿಯ ತಂಡವನ್ನು ಪ್ರತಿನಿಧಿಸಿದ ಬಳಿಕ ತನ್ನ ನೆಚ್ಚಿನ ಜರ್ಸಿಗೆ ವಿದಾಯ ಹೇಳುವ ಸಮಯ ಬಂದಿದೆ’’ ಎಂದು ಸುಬಾಸಿಕ್ ಹೇಳಿದ್ದಾರೆ.

ಫ್ರೆಂಚ್ ಕ್ಲಬ್ ಮೊನಾಕೊ ಪರ ಆಡುತ್ತಿರುವ ಸುಬಾಸಿಕ್ ಕ್ರೊಯೇಶಿಯ ಪರ 2009ರಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ 44 ಪಂದ್ಯಗಳನ್ನು ಆಡಿದ್ದಾರೆ. ತಲಾ 2 ವಿಶ್ವಕಪ್ ಹಾಗೂ ಯುರೋ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದಾರೆ.

2018ರ ವಿಶ್ವಕಪ್‌ನಲ್ಲಿ ಡೆನ್ಮಾರ್ಕ್ ವಿರುದ್ಧದ ಅಂತಿಮ-16ರ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮೂರು ಗೋಲುಗಳನ್ನು ನಿರಾಕರಿಸಿದ ಸುಬಾಸಿಕ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. 2006ರ ವಿಶ್ವಕಪ್‌ನಲ್ಲಿ ರಿಕಾರ್ಡ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು.

ರಶ್ಯದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಕೊನೆಯ ಕ್ಷಣದಲ್ಲಿ ಸುಬಾಸಿಕ್‌ಗೆ ಸ್ವಲ್ಪ ಗಾಯವಾಗಿತ್ತು. ಆದಾಗ್ಯೂ ತನ್ನ ಆಟವನ್ನು ಮುಂದುವರಿಸಿದ ಸುಬಾಸಿಕ್ ಎದುರಾಳಿ ತಂಡಕ್ಕೆ ಹಲವು ಗೋಲು ಗಳನ್ನು ನಿರಾಕರಿಸಿದ್ದರು. ಸುಬಾಸಿಕ್ ವಿಶ್ವಕಪ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಹೆಚ್ಚು ಗೋಲುಗಳನ್ನು ತಡೆದ ಮೂರನೇ ಗೋಲ್‌ಕೀಪರ್ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News