×
Ad

ಏಕಕಾಲದಲ್ಲಿ ಚುನಾವಣೆ: ಶೀಘ್ರ ಕಾನೂನು ಚೌಕಟ್ಟು ರಚನೆ

Update: 2018-08-15 20:14 IST

ಹೊಸದಿಲ್ಲಿ, ಆ.15: ಕಾನೂನು ಆಯೋಗವು ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆಗೆ ದೃಢವಾದ ಕಾನೂನು ಚೌಕಟ್ಟನ್ನು ಈ ತಿಂಗಳು ರಚಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಏಕಕಾಲಕ್ಕೆ ಚುನಾವಣೆ ನಡೆಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ಹಾಗೂ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಕಾನೂನು ಆಯೋಗ ಶಿಫಾರಸು ಮಾಡಲಿದೆ. ಈ ಶಿಫಾರಸುಗಳ ಬಗ್ಗೆ ರಾಜಕೀಯ ಪಕ್ಷಗಳ ಮಧ್ಯೆ ಚರ್ಚೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂವಿಧಾನದ ಕನಿಷ್ಟ ಎರಡು ಅಂಶಗಳಿಗೆ ತಿದ್ದುಪಡಿ ಮಾಡುವುದರ ಜೊತೆಗೆ, ಬಹುತೇಕ ರಾಜ್ಯಗಳು ಒಪ್ಪಿದರೆ ಏಕಕಾಲದ ಚುನಾವಣೆಯ ಪ್ರಥಮ ಹಂತ 2019ರಲ್ಲಿ ಜಾರಿಗೊಳ್ಳಲಿದೆ. 2024ರಲ್ಲಿ ದ್ವಿತೀಯ ಹಂತ ಜಾರಿಯಾಗಲಿದೆ ಎಂದು ಕಾನೂನು ಆಯೋಗವು ಕಳೆದ ಎಪ್ರಿಲ್‌ನಲ್ಲಿ ನಡೆಸಿದ್ದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

2021ರಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳು ಪ್ರಥಮ ಹಂತದಲ್ಲಿ ಸೇರಿವೆ. ದ್ವಿತೀಯ ಹಂತದ ರಾಜ್ಯಗಳ ಪಟ್ಟಿಯಲ್ಲಿ ಉ.ಪ್ರದೇಶ, ಗುಜರಾತ್, ಕರ್ನಾಟಕ, ದಿಲ್ಲಿ ಮತ್ತು ಪಂಜಾಬ್ ಸೇರಿದೆ. ಸರಕಾರದ ಸ್ಥಿರತೆಯ ದೃಷ್ಟಿಯಿಂದ ಬಹುಮತ ಪಡೆದ ಪಕ್ಷದ ಮುಖಂಡ ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕು. ಒಂದು ಸರಕಾರವು ಮಧ್ಯಾವಧಿಯಲ್ಲೇ ಪತನಗೊಂಡರೆ, ಉಳಿದಿರುವ ಅವಧಿಯವರೆಗೆ ಮುಂದಿನ ಸರಕಾರ ಕಾರ್ಯನಿರ್ವಹಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ, ಪ್ರಸ್ತಾವಿತ ಸಂವಿಧಾನ ತಿದ್ದುಪಡಿಗೆ ನ್ಯಾಯಾಲಯದ ಅನುಮತಿಯನ್ನು ಮೊದಲೇ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News