ಪಾಲನಾಗೃಹಗಳಲ್ಲಿರುವ 1,575 ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ: ಕೇಂದ್ರ
ಹೊಸದಿಲ್ಲಿ, ಆ.15: ದೇಶಾದ್ಯಂತ ಇರುವ 9,589 ಮಕ್ಕಳ ಸುರಕ್ಷಾ ಸಂಸ್ಥೆಗಳಲ್ಲಿರುವ 1,575 ಮಕ್ಕಳು ಈ ಪಾಲನಾಗೃಹಗಳಿಗೆ ಬರುವುದಕ್ಕೂ ಮೊದಲು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎಂಬುದು ಸಮೀಕ್ಷೆಯ ವೇಳೆ ತಿಳಿದುಬಂದಿದೆ ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
1,575 ಬಾಲಕ ಮತ್ತು ಬಾಲಕಿಯರು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎಂದು ಹೇಳುತ್ತಿದ್ದೀರಿ. ಈ ಮಕ್ಕಳ ಕಲ್ಯಾಣಕ್ಕಾಗಿ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ನ್ಯಾಯಾಧೀಶ ಮದನ್ ಬಿ. ಲೋಕುರ್ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರಲ್ಲಿ ಪ್ರಶ್ನಿಸಿದ್ದಾರೆ. ಚೈಲ್ಡ್‌ಲೈನ್ ಇಂಡಿಯ ಫೌಂಡೇಶನ್ ನಡೆಸಿದ ಸಮೀಕ್ಷೆಯ ವರದಿಯನ್ನು ಕೇಂದ್ರವು ಸಂಬಂಧಿತ ರಾಜ್ಯ ಸರಕಾರಗಳ ಜೊರೆ ಹಂಚಿಕೊಂಡಿದೆ. ಆದರೆ ಈ ಬಗ್ಗೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಪಿಂಕಿ ಆನಂದ್ ತಿಳಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶ ಎಸ್.ಅಬ್ದುಲ್ ನಝೀರ್ ಮತ್ತು ದೀಪಕ್ ಗುಪ್ತಾ ಅವರನ್ನೂ ಒಳಗೊಂಡಿರುವ ತ್ರಿಸದಸ್ಯ ಪೀಠ, ಯಾವ ರಾಜ್ಯಗಳು ಕ್ರಮವನ್ನು ತೆಗೆದುಕೊಂಡಿಲ್ಲ?, ನೀವು ಈ ಬಗ್ಗೆ ಏನು ಮಾಡಿದ್ದೀರಿ?, ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಕಾರಣ ಈ 1,575 ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಲೇ ಇರಬೇಕೇ? ಎಂದು ಕಿಡಿ ಕಾರಿದೆ.
ನಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ಮತ್ತು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು ನೋಡಿ ನಾವು ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಗುಪ್ತಾ ಅಭಿಪ್ರಾಯಿಸಿದ್ದಾರೆ. ಡಿಸೆಂಬರ್ 2015ರಿಂದ ಮಾರ್ಚ್ 2017ರ ವರೆಗೆ ನಡೆದ ಸಮೀಕ್ಷೆಯ ವರದಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿತ್ತು.