×
Ad

ಸ್ವಾತಂತ್ರ್ಯೋತ್ಸವ ದಿನ ಕಪ್ಪು ಬಾವುಟ ಹಾರಿಸಿದ ನಕ್ಸಲರು

Update: 2018-08-15 20:29 IST
ಸಾಂದರ್ಭಿಕ ಚಿತ್ರ

ಮುಂಬೈ, ಆ.15: ಮಹಾರಾಷ್ಟ್ರದ ನಕ್ಸಲ್‌ಪೀಡಿತ ಪ್ರದೇಶವಾಗಿರುವ ಗಡ್‌ಚಿರೋಲಿ ಎಂಬಲ್ಲಿರುವ ಅರೆವಾಡ ಪಂಚಾಯತ್ ಕಚೇರಿಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನಕ್ಸಲರು ಕಪ್ಪು ಧ್ವಜ ಹಾರಿಸಿದ ಘಟನೆ ವರದಿಯಾಗಿದೆ. ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲೆಂದು ತೆರಳಿದಾಗ ಧ್ವಜಸ್ಥಂಭದಲ್ಲಿ ಕಪ್ಪು ಬಣ್ಣದ ಧ್ವಜವನ್ನು ಆರೋಹಿಸಿರುವುದು ಗಮನಕ್ಕೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲ್ ಹಾವಳಿಯಿದ್ದು ಹೆಚ್ಚಿನ ಭದ್ರತೆಯಿಲ್ಲದೆ ಅಲ್ಲಿಗೆ ಪೊಲೀಸರು ಹೋಗುವುದು ಸೂಕ್ತವಲ್ಲ ಎಂಬ ಕಾರಣದಿಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಭಮ್ರಗಡ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಸುರೇಶ್ ಮಡ್ನೆ ತಿಳಿಸಿದ್ದಾರೆ.

ಕಪ್ಪು ಬಾವುಟವನ್ನು ತೆಗೆಯಲು ಸ್ಥಳೀಯರಿಗೆ ಹಾಗೂ ಗ್ರಾಮಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತ್ರಿವರ್ಣ ಧ್ವಜ ಹಾರಿಸಲೆಂದು ಪಂಚಾಯತ್ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಅಲ್ಲಿದ್ದ ಸ್ಥಂಭದ ಮೇಲೆ ಕಪ್ಪು ಧ್ವಜ ಹಾರುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಸಮೀಪದಲ್ಲೇ ಒಂದು ಪೋಸ್ಟರ್ ಅಂಟಿಸಿದ್ದ ನಕ್ಸಲರು ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ಬಹಿಷ್ಕರಿಸುವಂತೆ ಕರೆ ನೀಡಿದ್ದರು. ನಕ್ಸಲರ ಭೀತಿಯಿಂದ ಅದನ್ನು ತೆರವುಗೊಳಿಸಲು ಅವರು ಹಿಂಜರಿದಿದ್ದು, ಅಲ್ಲಿಯೇ ಸಮೀಪದಲ್ಲಿದ್ದ ಇನ್ನೊಂದು ಸ್ಥಂಭದಲ್ಲಿ ರಾಷ್ಟ್ರಧ್ವಜಾರೋಹಣ ನಡೆಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News