ಪ್ರಧಾನಿಯ ಕಾರ್ಯಕ್ರಮ ನಡೆದ ಸ್ಥಳದಲ್ಲಿ ತ್ಯಾಜ್ಯ ರಾಶಿ

Update: 2018-08-15 15:07 GMT

ಹೊಸದಿಲ್ಲಿ, ಆ.15: ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಾಮುಖ್ಯ ನೀಡುವುದಾಗಿ ಕೇಂದ್ರ ಸರಕಾರ ಪದೇ ಪದೇ ಹೇಳುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ ದಿನಾಚರಣೆಯ ಸಂದರ್ಭ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಮೈದಾನದ ತುಂಬ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಬಾಳೆಹಣ್ಣಿನ ಸಿಪ್ಪೆ ಅಲ್ಲಲ್ಲಿ ಚದುರಿ ಬಿದ್ದಿರುವ ದೃಶ್ಯ ಕಂಡು ಬಂದಿದೆ.

ಕಾರ್ಯಕ್ರಮ ನಡೆದ ಸ್ಥಳದಲ್ಲಿ ಅಲ್ಲಲ್ಲಿ ಕೆಲವು ತಾತ್ಕಾಲಿಕ ಕಸದ ಡಬ್ಬದ ವ್ಯವಸ್ಥೆ ಮಾಡಲಾಗಿದ್ದರೂ ಈ ಡಬ್ಬಿ ತುಂಬಿ ತುಳುಕಿ ತ್ಯಾಜ್ಯಗಳು ನೆಲದ ಮೇಲೆಲ್ಲಾ ಹರಡಿಬಿದ್ದಿದ್ದವು. ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸೀಟಿನ ವ್ಯವಸ್ಥೆ ಮಾಡಿದ್ದ ಸ್ಥಳದಲ್ಲಿ ಕಸ ವಿಲೇವಾರಿಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂದು ಕೆಲವು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಬಹಳ ಒತ್ತು ನೀಡುತ್ತಿದ್ದಾರೆ. ಆದರೂ ಇಂತಹ ಪ್ರಮುಖ ಕಾರ್ಯಕ್ರಮ ನಡೆಯುವಾಗ ಕಸ ವಿಲೇವಾರಿ ಅಥವಾ ಸಂಗ್ರಹಿಸುವ ವ್ಯವಸ್ಥೆ ಮಾಡದಿರುವುದು ಆಶ್ಚರ್ಯಕರವಾಗಿದೆ ಎಂದು ನಮಿತಾ ಶ್ರೀವಾಸ್ತವ ಎಂಬ ಶಿಕ್ಷಕಿ ಹೇಳಿದ್ದಾರೆ. ಕಾರ್ಯಕ್ರಮ ನಡೆದ ಬಳಿಕ ಇಡೀ ಪ್ರದೇಶವೇ ಒಂದು ಕಸ ಸಂಗ್ರಹಾಗಾರದಂತೆ ಭಾಸವಾಗುತ್ತಿತ್ತು. ಕಾರ್ಯಕ್ರಮ ಮುಗಿದ ಬಳಿಕ ಮಕ್ಕಳಿಗೆ ಬಾಳೆಹಣ್ಣು ಹಾಗೂ ವೇಫರ್‌ಗಳನ್ನು ಹಂಚಲಾಗಿದೆ. ಆದರೆ ಕಸದ ಡಬ್ಬಿ ಇರದ ಕಾರಣ ಅವರು ಬಾಳೆಹಣ್ಣಿನ ಸಿಪ್ಪೆ ಹಾಗೂ ಇತರ ತ್ಯಾಜ್ಯಗಳನ್ನು ಅಲ್ಲೇ ಬಿಸಾಡಿದ್ದಾರೆ ಎಂದು ಮತ್ತೊಬ್ಬ ಶಿಕ್ಷಕಿ ರಶ್ಮಿ ಗುಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News