ವೈಭವ್ ರಾವತ್‌ನ ಹಳೆಯ ದೂರವಾಣಿ ದಾಖಲೆಗಳನ್ನು ಪರಿಶೀಲಿಸುತ್ತಿರುವ ಎಟಿಎಸ್

Update: 2018-08-15 15:22 GMT

ಮುಂಬೈ, ಆ.15: ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹದಳದ (ಎಟಿಎಸ್) ಅಧಿಕಾರಿಗಳು ಸಂಘ ಪರಿವಾರದ ಅಂಗಸಂಸ್ಥೆಯ ಸದಸ್ಯನಾಗಿರುವ ವೈಭವ್ ರಾವತ್ ಹಾಗೂ ಇತರ ಇಬ್ಬರ ಒಂದು ವರ್ಷ ಹಳೆಯ ಮೊಬೈಲ್ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

 ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿರುವ ಆರೋಪದಲ್ಲಿ ಈ ಮೂವರನ್ನು ಬಂಧಿಸಲಾಗಿದೆ. ರಾವತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ಕಾರ್ಯಾಚರಿಸುತ್ತಿರುವ ತೀವ್ರವಾದಿಗಳ ಗುಂಪಿನ ಅಗ್ರಸಾಲಿನ ಕಾರ್ಯಕರ್ತನಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ, ಆರೋಪಿಗಳಿಗೆ ಸ್ಫೋಟಕಗಳನ್ನು ತಯಾರಿಸಲು ಕಚ್ಚಾವಸ್ತುಗಳನ್ನು ಮತ್ತು ಪಿಸ್ತೂಲುಗಳನ್ನು ಪೂರೈಕೆ ಮಾಡುತ್ತಿರುವವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗಸ್ಟ್ 10ರಂದು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ವೈಭವ್ ರಾವತ್ ಮತ್ತು ಶರದ್ ಕಲಸ್ಕರ್ ಎಂಬಾತನನ್ನು ಪಾಲ್ಗಡ್‌ನ ನಾಲಸೋಪಾರದಿಂದ ಹಾಗೂ ಸುಧನ್ವಾ ಗೊಂಡಲೇಕರ್ ಎಂಬಾತನನ್ನು ಪುಣೆಯಿಂದ ಬಂಧಿಸಿದ್ದರು. ರಾವತ್ ಹಿಂದು ಗೋವಂಶ ರಕ್ಷ ಸಮಿತಿಯ ಸದಸ್ಯನಾಗಿರುವುದು ತನಿಖೆಯ ವೇಳೆ ತಿಳಿದುಬಂದಿತ್ತು. ಈ ಜಾಲದಲ್ಲಿ ಇನ್ನಷ್ಟು ಜನರು ಶಾಮೀಲಾಗಿರಬಹುದು ಎಂದು ಶಂಕಿಸಿರುವ ಅಧಿಕಾರಿಗಳು ರಾವತ್ ಹಾಗೂ ಇತರ ಇಬ್ಬರು ಆರೋಪಿಗಳ ಒಂದು ವರ್ಷದಷ್ಟು ಹಳೆಯ ಮೊಬೈಲ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ರಾವತ್ ನಿವಾಸದಲ್ಲಿ ಪತ್ತೆಯಾಗಿರುವ ಬೃಹತ್ ಪ್ರಮಾಣದ ಸ್ಫೋಟಕಗಳು ಈ ಗುಂಪು ಯಾವುದೋ ದೊಡ್ಡ ಸಂಚನ್ನೇ ರೂಪಿಸುತ್ತಿತ್ತು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಎಟಿಎಸ್ ಅಧಿಕಾರಿಗಳು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News