ವ್ಯವಸ್ಥೆಯನ್ನು ಹಾಳುಗೆಡವಬೇಡಿ,ಅದನ್ನು ಸುಧಾರಿಸಿ: ನ್ಯಾಯಾಧೀಶರ ಭಿನ್ನಾಭಿಪ್ರಾಯ ಕುರಿತು ಸಿಜೆಐ ದೀಪಕ್ ಮಿಶ್ರಾ

Update: 2018-08-15 16:59 GMT

ಹೊಸದಿಲ್ಲಿ,ಆ.15: ವ್ಯವಸ್ಥೆಯಲ್ಲಿ ಸುಧಾರಣೆ ತರಲು ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮತ್ತು ಅಸಮಾಧಾನಗಳಿಗೆ ಅತೀತರಾಗಿರಬೇಕಾಗುತ್ತದೆ ಎಂದು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ಸ್ಯ ದಿನ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾ.ದೀಪಕ್ ಮಿಶ್ರಾ ಅವರು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಲ್ಲಿನ ಭಿನ್ನಾಭಿಪ್ರಾಯಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು,ವ್ಯವಸ್ಥೆಯೊಂದನ್ನು ಟೀಕಿಸುವುದು,ಅದರ ಮೇಲೆ ದಾಳಿ ನಡೆಸುವುದು ಮತ್ತು ಅದನ್ನು ಹಾಳು ಮಾಡುವುದು ಸುಲಭದ ಕೆಲಸವಾಗಿದೆ. ಆದರೆ ಅದನ್ನು ಹೆಚ್ಚು ಕ್ರಿಯಾಶೀಲವನ್ನಾಗಿ ಪರಿವರ್ತಿಸುವುದು ಕಠಿಣ ಮತ್ತು ಸವಾಲಿನ ವಿಷಯವಾಗಿದೆ. ಇದಕ್ಕಾಗಿ ವ್ಯಕ್ತಿಗತ ಮಹತ್ವಾಕಾಂಕ್ಷೆಗಳು ಮತ್ತು ಅಸಮಧಾನಗಳಿಗೆ ಅತೀತರಾಗಿರಬೇಕಾಗುತ್ತದೆ ಎಂದು ಹೇಳಿದರು.

ಸಕಾರಾತ್ಮಕ ವಿಚಾರಧಾರೆಯೊಂದಿಗೆ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು,ತರ್ಕಬದ್ಧತೆ,ಪಕ್ವತೆ,ಹೊಣೆಗಾರಿಕೆ ಮತ್ತು ಸಮಾಧಾನದಿಂದ ದೃಢವಾದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉತ್ಪಾದಕತೆಗೆ ಪೂರಕವಾಗಿರಬೇಕೇ ಹೊರತು ಅದಕ್ಕೆ ವಿರೋಧಿಯಾಗಿರಬಾರದು. ಆಗ ಮಾತ್ರ ಯಾವುದೇ ಸಂಸ್ಥೆಯು ಹೊಸ ಎತ್ತರಕ್ಕೇರುತ್ತದೆ ಎಂದರು.

ಸರ್ವೋಚ್ಚ ನ್ಯಾಯಾಲಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಕೆಲವು ಶಕ್ತಿಗಳಿರಬಹುದು,ಆದರೆ ನ್ಯಾಯಾಂಗವು ಅವುಗಳಿಗೆ ಮಣಿಯುವುದಿಲ್ಲ ಎಂದೂ ನ್ಯಾ.ಮಿಶ್ರಾ ಹೇಳಿದರು.

ಈ ವರ್ಷದ ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶಗಳ ಕುರಿತು ತಮ್ಮ ಕೆಲವು ಅಸಮಾಧಾನಗಳನ್ನು ಹೇಳಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಪತ್ರಿಕಾಗೋಷ್ಠಿಯೊಂದನ್ನು ಕರೆದು ನ್ಯಾಯಾಂಗದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News