57 ವರ್ಷಗಳ ಹಿಂದೆ ಭಾರತದಿಂದ ಕದಿಯಲಾಗಿದ್ದ ವಿಗ್ರಹ ವಾಪಸ್!

Update: 2018-08-15 16:55 GMT

ಲಂಡನ್, ಆ. 15: 57 ವರ್ಷಗಳ ಹಿಂದೆ ಬಿಹಾರದ ನಳಂದದಲ್ಲಿನ ವಸ್ತುಸಂಗ್ರಹಾಲಯವೊಂದರಿಂದ ಕದಿಯಲಾಗಿದ್ದ 12ನೇ ಶತಮಾನದ ಕಂಚಿನ ಬುದ್ಧ ವಿಗ್ರಹವೊಂದನ್ನು ಲಂಡನ್‌ನ ಮೆಟ್ರೊಪಾಲಿಟನ್ ಪೊಲೀಸರು ಬುಧವಾರ ಭಾರತಕ್ಕೆ ಮರಳಿಸಿದ್ದಾರೆ.

ಭಾರತೀಯ ಸ್ವಾತಂತ್ಸ್ಯ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಈ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ನಳಂದದಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ಮ್ಯೂಸಿಯಂನಿಂದ 1961ರಲ್ಲಿ ಈ ವಿಗ್ರಹ ಸೇರಿದಂತೆ ಒಟ್ಟು 14 ವಿಗ್ರಹಗಳನ್ನು ಕದಿಯಲಾಗಿತ್ತು. ಈ ವರ್ಷಗಳಲ್ಲಿ ಈ ವಿಗ್ರಹ ಹಲವರ ಕೈ ಬದಲಿಸಿ ಲಂಡನ್‌ನ ಹರಾಜು ಸಂಸ್ಥೆಯೊಂದರಲ್ಲಿ ಕಾಣಿಸಿಕೊಂಡಿತು.

 ಈ ವಿಗ್ರಹ ಭಾರತದಿಂದ ಕದಿಯಲ್ಪಟ್ಟಿದ್ದು ಎಂಬ ವಿಷಯವನ್ನು ಹರಾಜುದಾರ ಮತ್ತು ಮಾಲೀಕರಿಗೆ ಮನವರಿಕೆ ಮಾಡಿದಾಗ ಅದನ್ನು ಭಾರತಕ್ಕೆ ಮರಳಿಸಲು ಒಪ್ಪಿದರು ಎಂದು ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ನಡೆದ ವ್ಯಾಪಾರ ಮೇಳವೊಂದರಲ್ಲಿ ಈ ವಿಗ್ರಹವನ್ನು ಪ್ರದರ್ಶನಕ್ಕಿಟ್ಟಿದ್ದ ಸಂದರ್ಭದಲ್ಲಿ ‘ಕಲೆಯ ವಿರುದ್ಧದ ಅಪರಾಧಗಳ ಸಂಶೋಧನಾ ಸಂಘ’ದ ಲಿಂಡಾ ಆಲ್ಬರ್ಟ್‌ಸನ್ ಮತ್ತು ಇಂಡಿಯಾ ಪ್ರೈಡ್ ಪ್ರಾಜೆಕ್ಟ್‌ನ ವಿಜಯ ಕುಮಾರ್ ಗುರುತಿಸಿದ್ದರು. ಅವರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ಬುಧವಾರ ನಡೆದ ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ಈ ವಿಗ್ರಹವನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಶನರ್ ವೈ.ಕೆ. ಸಿನ್ಹಾಗೆ ಹಿಂದಿರುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News