ಕಳುಹಿತ್ಲು ಬೋಟುಗಳಿಗೆ ಹಾನಿ: ಸಚಿವೆ ಜಯಮಾಲರಿಂದ ಪರಿಶೀಲನೆ

Update: 2018-08-15 17:01 GMT

ಬೈಂದೂರು, ಆ.15: ಶಿರೂರು ಕಳುಹಿತ್ಲು ಎಂಬಲ್ಲಿ ಭಾರೀ ಮಳೆಯಿಂದ ನದಿ ನೀರಿನ ರಭಸಕ್ಕೆ ಸಮುದ್ರಕ್ಕೆ ಕೊಚ್ಚಿ ಹೋಗಿ ಹಾನಿಗೊಳಗಾದ ಬೋಟು ಗಳನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಜಿ ಜಿಪಂ ಸದಸ್ಯ ಮದನ್ ಕುಮಾರ್ ಈ ಕುರಿತು ಸಚಿವರಿಗೆ ಮಾಹಿತಿ ನೀಡಿದ್ದು, ಹಾನಿಗೊಳಗಾದ ಬೋಟುಗಳಿಗೆ ಪ್ರಾಕೃತಿಕ ವಿಕೋಪ ನಿಧಿಯಡಿಯಲ್ಲಿ ಶೀಘ್ರ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಸರಕಾರದ ಗಮನ ಸೆಳೆದು ಶೀಘ್ರ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ, ಜಿಪಂ ಸದಸ್ಯ ಸುರೇಶ್ ಬಟ್ಟಾಡಿ, ಗೌರಿ ದೇವಾಡಿಗ, ಶಿರೂರು ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ಗ್ರಾಮ ಲೆಕ್ಕಾ ಧಿಕಾರಿ ಸತೀಶ್ ಹೊಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು.
ನೆರೆ, ಮಳೆ ಇಳಿಮುಖ: ಮೂರು ದಿನಗಳ ಕಾಲ ಸತತವಾಗಿ ಸುರಿದು ಜಿಲ್ಲೆಯಾದ್ಯಂತ ನೆರೆ ಹಾಗೂ ಅಪಾರ ಹಾನಿಯೊಂದಿಗೆ ಜನಜೀವನ ಅಸ್ತವ್ಯಸ್ತ ಗೊಳ್ಳಲು ಕಾರಣವಾದ ಮಳೆ ಇಂದು ವಿಶ್ರಾಂತಿ ಪಡೆದ ಕಾರಣ, ಕುಂದಾಪುರ, ಕಾರ್ಕಳ, ಉಡುಪಿ ತಾಲೂಕಿನಾದ್ಯಂತ ನಿನ್ನೆ ಕಂಡು ಬಂದಿದ್ದ ನೆರೆ ಇಂದು ಬಹುತೇಕ ಇಳಿಮುಖವಾಗಿತ್ತು.

ಹೀಗಾಗಿ ನಿನ್ನೆ ಗಂಜಿಕೇಂದ್ರದಲ್ಲಿ ಹಾಗೂ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದ ಬಹುತೇಕ ಮಂದಿ ಇಂದು ತಮ್ಮ ತಮ್ಮ ಮನೆಗಳಿಗೆ ಮರಳಿ, ನೆರೆಯಿಂದ ಕೆಸರುಮಯವಾದ ಮನೆ ಹಾಗೂ ಪರಿಸರವನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತರಾದರು.

ಹಿರಿಯಡ್ಕ, ಹೆಬ್ರಿ, ಬೈಂದೂರುಗಳಲ್ಲಿ ರಸ್ತೆ ಮೇಲೆ ಹರಿಯುತಿದ್ದ ನೀರು ಸಹ ಇಳಿದುಹೋಗಿದ್ದು, ಸಂಚಾರ ಎಂದಿನಂತೆ ಆರಂಭಗೊಂಡಿತು. ಆದರೆ ರಸ್ತೆ ಸಾಕಷ್ಟು ಕೆಟ್ಟು ಹೋಗಿದ್ದು, ವಾಹನಗಳಲ್ಲಿ ಸಂಚರಿಸುವುದು ಇನ್ನಷ್ಟು ಕಷ್ಟವೆನಿಸಿದೆ. ತುಂಬಿ ಹರಿಯುತಿದ್ದ ಜಿಲ್ಲೆಯ ನದಿಗಳ ನೀರು ಸಹ ಇಂದು ಇಳಿಮುಖವಾಗಿದೆ. ಹೀಗಾಗಿ ಜಿಲ್ಲೆಯ ಜನಜೀವನ ನಿಧಾನವಾಗಿ ಸಾಮಾನ್ಯ ಗೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News